ಚಿತ್ತಗಾಂಗ್ : ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನ ಭಾರತ ತಂಡಕ್ಕೆ ಫೀಲ್ಡ್ ಅಂಪೈರ್ಗಳು 5 ಪೆನಾಲ್ಟಿ ರನ್ಗಳನ್ನು ಕೊಟ್ಟಿದ್ದಾರೆ. ಬಾಲಗೋಂಚಿ ಬ್ಯಾಟ್ಸ್ಮನ್ಗಳಾದ ಆರ್. ಅಶ್ವಿನ್ (58) ಹಾಗೂ ಕುಲ್ದೀಪ್ ಯಾದವ್ (40) ಆಟದಿಂದ 404 ರನ್ ಪೇರಿಸಿದ ಭಾರತ ತಂಡಕ್ಕೆ ಈ ಐದು ರನ್ಗಳು ಬೋನಸ್ ಎನಿಸಿಕೊಂಡಿತು. ಈ ರನ್ಗಳನ್ನು ಅಂಪೈರ್ ಕೊಟ್ಟಿರುವುದು ಐಸಿಸಿಐ ಹೊಸ ನಿಯಮದ ಪ್ರಕಾರ.
ಮೊದಲ ಇನಿಂಗ್ಸ್ನ 112ನೇ ಓವರ್ ಎಸೆದಿದ್ದು ಬಾಂಗ್ಲಾದೇಶದ ಬೌಲರ್ ತೈಜುಲ್ ಇಸ್ಲಾಮ್. ಎರಡನೇ ಎಸೆತವನ್ನು ಬ್ಯಾಟರ್ ಆರ್ ಅಶ್ವಿನ್ ಅವರು ಫಸ್ಟ್ ಸ್ಲಿಪ್ ಮೂಲಕ ಥರ್ಡ್ ಮನ್ ಏರಿಯಾಗೆ ಕಳುಹಿಸಿದ್ದರು. ಫೀಲ್ಡರ್ ಚೆಂಡನ್ನು ಹಿಡಿದು ವಾಪಸ್ ಎಸೆದಿದ್ದಾರೆ. ಅದು ನೇರವಾಗಿ ವಿಕೆಟ್ಕೀಪರ್ ಹಿಂದುಗಡೆ ಇಡಲಾಗಿದ್ದ ಹೆಲ್ಮೆಟ್ಗೆ ಬಡಿದಿದೆ. ಐಸಿಸಿಯ ಹೊಸ ನಿಯಮದ ಪ್ರಕಾರ ಬೌಲಿಂಗ್ ಮಾಡುತ್ತಿರುವ ತಂಡ ರೀತಿಯ ಅಡಚಣೆಗಳನ್ನು ಏನಾದರೂ ಸೃಷ್ಟಿಸಿಕೊಂಡರೆ ಐದು ಅಂಕಗಳನ್ನು ಪೆನಾಲ್ಟಿ ರೂಪದಲ್ಲಿ ನೀಡಬಹುದು. ಅಂತೆಯೇ ಭಾರತಕ್ಕೆ ಐದು ಅಂಕಗಳು ಲಭಿಸಿತು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಂಗ್ಲಾದೇಶ ವಿರುದ್ಧದ ಸರಣಿಯು ಭಾರತ ತಂಡಕ್ಕೆ ನಿರ್ಣಾಯಕವಾಗಿದ್ದು, ಈ ಸರಣಿಯನ್ನು ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ಸ್ ಅಂಕಪಟ್ಟಿಯಲ್ಲಿ ಮುನ್ನಡೆ ಗಳಿಸಲು ಸಾಧ್ಯ. ಭಾರತ ತಂಡಕ್ಕೆ ಇನ್ನು ಉಳಿದಿರುವುದು ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿ ಮಾತ್ರ. ಅದು ಬಾಂಗ್ಲಾದೇಶದಷ್ಟು ಸರಳವಲ್ಲ. ಹೀಗಾಗಿ ಬಾಂಗ್ಲಾವಿರುದ್ಧದ ಸರಣಿಯನ್ನು ಭಾರಿ ಅಂತರದಿಂದ ಗೆದ್ದರೆ ಅನುಕೂಲ.
ಇದನ್ನೂ ಓದಿ | Fielder ತಲೆ ಮೇಲೊಂದು ಕ್ಯಾಮೆರಾ: ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿ ಬಳಕೆ