ಹೈದರಾಬಾದ್ : ಭಾರತ ಕ್ರಿಕೆಟ್ ತಂಡದ ಅತಿ ವೇಗದ ಬೌಲರ್ ಉಮ್ರಾನ್ ಮಲಿಕ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಭರವಸೆ ಹುಟ್ಟಿಸಿದ್ದಾರೆ. ಸತತವಾಗಿ 150 ಕಿಲೋ ಮೀಟರ್ಗಿಂತಲೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಅವರು ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡುವ ನಿರೀಕ್ಷೆಯಿದೆ. ಬಿಸಿಸಿಐ ಕೂಡ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ. ಜಮ್ಮು ಕಾಶ್ಮೀರದ ಯುವ ಬೌಲರ್ ವಿಕೆಟ್ ಪಡೆಯುತ್ತಿರುವ ಹೊರತಾಗಿಯೂ ಎದುರಾಳಿ ತಂಡಕ್ಕೆ ರನ್ ಬಿಟ್ಟುಕೊಡುವುದು ತಂಡದ ಪಾಲಿಗೆ ಆತಂಕದ ಸಂಗತಿ. ನಾಯಕರಿಗೂ ಅವರ ಬೌಲಿಂಗ್ ಸ್ಪೆಲ್ಗಳನ್ನು ಬಳಸಿಕೊಳ್ಳುವುದು ಕೆಲವೊಮ್ಮೆ ಸವಾಲೆನಿಸುತ್ತದೆ. ಆದಾಗ್ಯೂ ಉಮ್ರಾನ್ ವೇಗದ ಸಾಹಸವನ್ನು ಟೀಮ್ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಕೊಂಡಾಡಿದ್ದಾರೆ.
ಉಮ್ರಾನ್ ಮಲಿಕ್ ಭಾರತ ತಂಡಕ್ಕೆ ಲಭಿಸಿರುವ ಅಸಾಮಾನ್ಯ ಪ್ರತಿಭೆ. ಅವರು ಇನ್ನಷ್ಟು ವೇಗದಲ್ಲಿ ಬೌಲಿಂಗ್ ಮಾಡುವುದಕ್ಕೆ ಸಾಧ್ಯ ಹಾಗೂ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ಸೃಷ್ಟಿಸಿರುವ ಗಂಟೆಗೆ 161.3 ಕಿಲೋ ಮೀಟರ್ ವೇಗದ ದಾಖಲೆಯನ್ನು ಮುರಿಯಬಲ್ಲರು ಎಂಬುದಾಗಿ ಭರತ್ ಅರುಣ್ ಹೇಳಿದ್ದಾರೆ.
ವೇಗದ ಬೌಲಿಂಗ್ಗೆ ದೈಹಿಕ ಫಿಟ್ನೆಸ್ ಹಾಗೂ ಕೌಶಲ ಎರಡೂ ಬೇಕು. ಎರಡೂ 50-ಫಿಫ್ಟಿ ನೆರವು ಪಡೆಯುತ್ತದೆ. ಈ ವಿಚಾರದಲ್ಲಿ ಉಮ್ರಾನ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಅದೇ ರೀತಿ ಬೌಲಿಂಗ್ ವೇಗ ಮತ್ತು ಲಯ ಕಾಪಾಡಿಕೊಳ್ಳುವುದು ಕೂಡ ಅತ್ಯಗತ್ಯ ಎಂದು ಹೇಳಿದ್ದಾರೆ.
ಬೌಲಿಂಗ್ ವೇಗವನ್ನು ಏಕಾಏಕಿ ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲ. 125 ಕಿಲೋ ಮೀಟರ್ ವೇಗದಲ್ಲಿ ಚೆಂಡು ಎಸೆಯುವವರು ಏಕಾಏಕಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವುದಕ್ಕೆ ಸಾಧ್ಯವಿಲ್ಲ. 140ರಿಂದ ಗರಿಷ್ಠ 145 ಕಿಲೋ ಮೀಟರ್ ವೇಗದಲ್ಲಿ ಚೆಂಡು ಎಸೆಯಬಹುದು ಎಂಬುದಾಗಿಯೂ ಅವರು ಹೇಳಿದರು.
ಇದನ್ನೂ ಓದಿ | Umran Malik | ಶ್ರೀಲಂಕಾ ತಂಡದ ವಿರುದ್ಧ ಉಮ್ರಾನ್ ಮಲಿಕ್ ಇದುವರೆಗಿನ ಬೌಲಿಂಗ್ ಸಾಧನೆ