ನವ ದೆಹಲಿ : ಭಾರತ ೧೯ರ ವಯೋಮಿತಿಯ ತಂಡದ ಮಾಜಿ ನಾಯಕ ಉನ್ಮುಕ್ತ್ ಚಾಂದ್ ಅವರ ಕಣ್ಣಿಗೆ ಆಟದ ನಡುವೆ ಗಂಭೀರ ಪೆಟ್ಟು ಬಿದ್ದಿದೆ. ಈ ಸಂಗತಿಯನ್ನು ಅವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಜತೆಗೆ ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಉನ್ಮುಕ್ತ್ ಅವರು ಪ್ರಸ್ತುತ ಭಾರತದಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಅಮೆರಿಕದ ತಂಡವೊಂದರ ಪರ ಆಡುತ್ತಿದ್ದಾರೆ. ಆದರೆ, ಯಾವ ಪಂದ್ಯದಲ್ಲಿ ಆಡುವಾಗ ಅವರಿಗೆ ಗಾಯವಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
೨೮ ವರ್ಷದ ಉನ್ಮುಕ್ತ್ ಚಾಂದ್ ಅವರು ಬಿಸಿಸಿಐ ಜತೆಗಿನ ಒಪ್ಪಂದವನ್ನು ಮೊಟಕುಗೊಳಿಸಿ, ಕ್ರಿಕೆಟ್ ಆಡಲು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ, ಮೈನರ್ ಕ್ರಿಕೆಟ್ ಲೀಗ್‌ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ ತಂಡದ ಪರವಾಗಿ ಆಡುತ್ತಿದ್ದಾರೆ. ಅಲ್ಲದೆ, ಬಿಗ್ ಬ್ಯಾಶ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ ತಂಡದ ಜತೆಗೂ ಒಪ್ಪಂದ ಮಾಡಿಕೊಂಡಿದ್ದಾರೆ.
ಅಕ್ಟೋಬರ್ ೧ರಂದು ತಮಗೆ ಆಗಿರುವ ಗಾಯದ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. “ಅಥ್ಲೀಟ್ ಒಬ್ಬರ ಜೀವನ ಯಾನ ಸರಳವಾಗಿರುವುದಿಲ್ಲ. ಕೆಲವೊಂದು ದಿನಗಳು ವಿಜಯದ ಸಂಭ್ರಮವಿರುತ್ತದೆ. ಇನ್ನೊಂದಿಷ್ಟು ದಿನಗಳು ಬರೇ ನೋವು, ಗಾಯ ಹಾಗೂ ನಿರಾಸೆಗಳಿರುತ್ತವೆ. ದೊಡ್ಡ ಮಟ್ಟದ ದುರಂತವನ್ನು ತಪ್ಪಿಸಿದ ದೇವರಿಗೆ ಕೃತಜ್ಞನಾಗಿದ್ದೇನೆ. ಉತ್ಸಾಹದಿಂದ ಆಡಬೇಕು, ಆದರೆ ಎಚ್ಚರಿಕೆಯಿಂದ ಆಡಬೇಕು. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು,” ಎಂದು ಅವರು ಬರೆದುಕೊಂಡಿದ್ದಾರೆ.
ಉನ್ಮುಕ್ತ್ ಚಾಂದ್ ೨೦೧೨ರಲ್ಲಿ ಭಾರತ ೧೯ರ ವಯೋಮಿತಿಯ ತಂಡ ನಾಯಕರಾಗಿ ಆಡಿದ್ದರು. ಆದರೆ, ಅವರಿಗೆ ಹಿರಿಯರ ತಂಡದಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್), ಮುಂಬಯಿ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಯ್ಕೆಗೊಂಡಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ೬೭ ಪ್ರಥಮ ದರ್ಜೆ ಹಾಗೂ ೧೨೦ ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಚಾಂದ್, ದಶಕದ ಕಾಲ ದೇಶಿಯ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | ಕಾಲು ನೋವಿನಲ್ಲಿ ಮಲಗಿರುವ ರವೀಂದ್ರ ಜಡೇಜಾ ಮುಂದೆ ಡಾನ್ಸ್ ಮಾಡಿದ ಶಿಖರ್ ಧವನ್