Site icon Vistara News

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Unmukt Chand

ನ್ಯೂಯಾರ್ಕ್​: 2021ರಲ್ಲಿ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಅಮೆರಿಕ(USA) ತಂಡ ಸೇರಿದ್ದ, 2012ರ ಅಂಡರ್‌-19 ವಿಶ್ವಕಪ್‌ ಹೀರೊ ಉನ್ಮುಕ್ತ್ ಚಂದ್‌(Unmukt Chand) ಅವರ ಟಿ20 ವಿಶ್ವಕಪ್(T20 World Cup 2024)​ ಆಡುವ ಕನಸು ನನಸಾಗುವ ಸಾಧ್ಯತೆ ಕ್ಷೀಣವಾದಂತೆ ತೋರುತ್ತಿದೆ. ಇದೇ ಏಪ್ರಿಲ್ 7 ರಿಂದ ಹೂಸ್ಟನ್‌ನಲ್ಲಿ ನಡೆಯಲಿರುವ ಕೆನಡಾ(Canada T20Is) ವಿರುದ್ಧದ ಟಿ20 ಸರಣಿಗಾಗಿ ಅಮೆರಿಕ ಪ್ರಕಟಿಸಿದ 15 ಸದಸ್ಯರ ತಂಡದಿಂದ ಉನ್ಮುಕ್ತ್ ಚಂದ್ ಅವರನ್ನು ಕೈಬಿಡಲಾಗಿದೆ. ಇದು 2024 ರ T20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುವ ಚಂದ್ ಅವರ ಕನಸಿಗೆ ಭಾರಿ ಹೊಡೆತ ಬಿದ್ದಂತಿದೆ.

ಇದೇ ವರ್ಷದ ಆರಂಭದಲ್ಲಿ ಉನ್ಮುಕ್ತ್ ಚಂದ್‌ ಅವರು ಭಾರತ ವಿರುದ್ಧ ಟಿ20 ವಿಶ್ವಕಪ್​ ಆಡುವುದು ನನ್ನ ಪ್ರಮುಖ ಗುರಿ ಎಂದು ಹೇಳಿದ್ದರು. ಆದರೆ, ಇದೀಗ ಅವರಿಗೆ ಸ್ಥಾನ ಸಿಗುವುದೇ ಅನುಮಾನ ಎನ್ನುವಂತಿದೆ. ಅಮೆರಿಕ ಕ್ರಿಕೆಟ್​ ಮಂಡಳಿಗೆ ಚಂದ್​ಗೆ ಸ್ಥಾನ ನೀಡುವ ಕುರಿತು ಆಸಕ್ತಿ ಇಲ್ಲವಾದಂತೆ ತೋರುತ್ತಿದೆ. ಇಲ್ಲವಾದಲ್ಲಿ ಅವರನ್ನು ಕೆನಡಾ ವಿರುದ್ಧದ ಸರಣಿಯಂದ ಕೈಬಿಡುವ ಸಾಧ್ಯತೆ ಇರುತ್ತಿರಲಿಲ್ಲ.

2012ರ ಅಂಡರ್‌-19 ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅಜೇಯ 111 ರನ್‌ ಬಾರಿಸಿ ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಆದರೆ ಸೀನಿಯರ್‌ ಮಟ್ಟದಲ್ಲಿ ಆಡಲು ಅವರಿಗೆ ಅವಕಾಶ ಲಭಿಸಲೇ ಇಲ್ಲ. 67 ಪ್ರಥಮ ದರ್ಜೆ ಪಂದ್ಯಗಳಿಂದ 3,379 ರನ್‌, 120 ಲಿಸ್ಟ್‌ ಎ ಪಂದ್ಯಗಳಿಂದ 4,505 ರನ್‌, ಟಿ20 ಕ್ರಿಕೆಟ್‌ನಲ್ಲಿ 1,565 ರನ್‌ ಬಾರಿಸಿದ ಸಾಧನೆ ಉನ್ಮುಕ್ತ್ ಚಂದ್‌ ಅವರದು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಂದಿನಿ ಪ್ರಾಯೋಜಕತ್ವ?

2021 ಅವರು ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಅಮೆರಿಕಕ್ಕೆ ತೆರಳಿದ್ದರು. ತಮ್ಮ ನಾಯಕತ್ವದಲ್ಲಿ ಸಿಲಿಕಾನ್‌ ಸ್ಟ್ರೈಕರ್ಸ್‌ ತಂಡಕ್ಕೆ ಮೈನರ್‌ ಲೀಗ್ ಕ್ರಿಕೆಟ್‌ ಗೆದ್ದುಕೊಟ್ಟಿದ್ದರು ಹಾಗೂ ಆಡಿದ್ದ ಮೂರೂ ಆವೃತ್ತಿಗಳಿಂದ 1500ಕ್ಕೂ ಹೆಚ್ಚಿನ ರನ್‌ಗಳನ್ನು ಸಿಡಿಸಿದ್ದರು. ಆದರೂ ಕೂಡ ಅವರಿಗೆ ಕೆನಡಾ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ.

ಐಪಿಎಲ್ 2013ರಲ್ಲಿ ರಾಜಸ್ಥಾನಕ್ಕಾಗಿ 1 ಪಂದ್ಯವನ್ನು ಆಡಿದ ಮತ್ತು ಭಾರತ ಅಂಡರ್​-19 ತಂಡವನ್ನು ಪ್ರತಿನಿಧಿಸಿರುವ ಹರ್ಮೀತ್ ಸಿಂಗ್​ ಅವರು ಕೆನಡಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಮೂಲಕ ಅಮೆರಿಕ ತಂಡದ ಪರ ಚೊಚ್ಚಲ ಕರೆ ಪಡೆದಿದ್ದಾರೆ.

ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ ಜೂನ್ 1 ರಿಂದ ಆರಂಭವಾಗಲಿದೆ. ವಿಶ್ವಕಪ್​ ಟೂರ್ನಿಯ(T20 World Cup 2024) ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದೆ. ಜತೆಗೆ ತಂಡಗಳ ಪಟ್ಟಿಯನ್ನು ಅಂತಿಮಗೊಳಿಸಲು ಗಡುವು ಕೂಡ ನೀಡಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. 

Exit mobile version