Site icon Vistara News

Pele Health | ಚಿಕಿತ್ಸೆಗೆ ಸ್ಪಂದಿಸದ ಫುಟ್ಬಾಲ್‌ ದಿಗ್ಗಜ ಪೀಲೆ, ಎಂಡ್‌ ಆಫ್‌ ಲೈಫ್‌ ಕೇರ್‌ಗೆ ರವಾನೆ

pele health

ಬ್ರಾಸಿಲಿಯಾ (ಬ್ರೆಜಿಲ್‌): ಫುಟ್ಬಾಲ್‌ ಕ್ಷೇತ್ರದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೀಲೆ ಅವರ ಆರೋಗ್ಯ ಸ್ಥಿತಿ (Pele health) ಗಂಭೀರವಾಗಿದ್ದು ಚಿಕಿತ್ಸೆಗೆ ಸ್ಪಂದಿಸದ ಅವರನ್ನು ಪಾಲಿವೇಟಿವ್‌ ಕೇರ್‌ಗೆ (ಜೀವನದ ಕೊನೇಕ್ಷಣದಲ್ಲಿ ಚಿಕಿತ್ಸೆ ನೀಡುವ ವಿಭಾಗ) ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ. ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ೮೨ ವರ್ಷದ ಬ್ರೆಜಿಲ್‌ನ ದಂತಕತೆಗೆ ಕಿಮೋಥೆರಪಿ ಮಾಡಲಾಗುತ್ತಿತ್ತು. ಆದರೆ, ಅದಕ್ಕೆ ಸ್ಪಂದಿಸದ ಕಾರಣ ಪಾಲಿವೇಟಿವ್‌ ಕೇರ್‌ಗೆ ವರ್ಗಾಯಿಸಲಾಗಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೀಲೆ ಅವರಿಗೆ ೨೦೨೧ರಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಕ್ಯಾನ್ಸರ್‌ ಗೆಡ್ಡೆಯನ್ನು ತೆಗೆಯಲಾಗಿತ್ತು. ಅಲ್ಲಿಂದ ಅವರು ನಿರಂತರವಾಗಿ ಆಸ್ಪತ್ರೆಗೆ ಬರುತ್ತಿದ್ದರು. ಅಂತೆಯೇ ಅವರು ಕೆಲವು ದಿನಗಳ ಹಿಂದೆ ಅಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕ್ಯಾನ್ಸರ್‌ ನಾಲಗೆಗೂ ಹರಡಿದೆ ಎಂಬುದಾಗಿ ಹೇಳಲಾಗಿತ್ತು. ಶುಕ್ರವಾರ ಬೆಳಗ್ಗೆ ಅವರ ಪುತ್ರಿ, ತಂದೆಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಅವರು ಪ್ರತಿರೋಧಕ ಔಷಧಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ, ಸಂಜೆಯ ವೇಳೆಗೆ ಬ್ರೆಜಿಲ್‌ ಪತ್ರಿಕೆಯೊಂದು ಫುಟ್ಬಾಲ್‌ ಆಟಗಾರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬುದಾಗಿ ವರದಿ ಮಾಡಿದೆ.

ಆಸ್ಪತ್ರೆಗೆ ದಾಖಲಾದ ಬಳಿಕ ಪೀಲೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಿದವರಿಗೆ ಧನ್ಯವಾದ ತಿಳಿಸಿದ್ದರು. ಅಲ್ಲದೆ, ಫುಟ್ಬಾಲ್ ವಿಶ್ವ ಕಪ್‌ ವೇಳೆ ತಮ್ಮನ್ನು ಸ್ಮರಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದರು.

“ಗೆಳೆಯರೇ ನಾನು ನನ್ನ ತಿಂಗಳ ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ಈ ರೀತಿಯಲ್ಲಿ ಉತ್ತಮ ಸಂದೇಶಗಳನ್ನು ಪಡೆಯುವುದು ನನಗೆ ಖುಷಿಯ ವಿಚಾರವಾಗಿದೆ,” ಎಂಬುದಾಗಿ ಪೀಲೆ ಬರೆದುಕೊಂಡಿದ್ದರು.

ಪಾಲಿವೇಟಿವ್‌ ಕೇರ್‌ ಎಂದರೇನು?

ಚಿಕಿತ್ಸೆಗೆ ಸ್ಪಂದಿಸದೇ ಗಂಭೀರ ಸ್ಥಿತಿ ತಲುಪಿರುವವರನ್ನು ನೋಡಿಕೊಳ್ಳಲಾಗುವ ಆಸ್ಪತ್ರೆಯ ವಿಭಾಗವನ್ನು ಪಾಲಿವೇಟಿವ್‌ ಕೇರ್‌ ಎಂದು ಕರೆಯಲಾಗುತ್ತದೆ. ಇಲ್ಲಿ ಮೂಲ ರೋಗಕ್ಕೆ ಔಷಧ ನೀಡಲಾಗುವುದಿಲ್ಲ. ಬದಲಾಗಿ ಉಸಿರಾಟದ ಸಮಸ್ಯೆ ಹಾಗೂ ಅತೀವ ನೋವಿಗೆ ಮಾತ್ರ ಔಷಧ ನೀಡಲಾಗುತ್ತಿದೆ. ಇದನ್ನು ಮರಣ ಬಾಗಿಲು ತಟ್ಟುತ್ತಿರುವ ರೋಗಿಗಳ ಆರೈಕೆ ಪ್ರದೇಶ ಎಂದು ಹೇಳಲಾಗುತ್ತಿದ್ದರೂ, ವೈದ್ಯಕೀಯ ಕ್ಷೇತ್ರ ಸಂಪೂರ್ಣವಾಗಿ ಒಪ್ಪುವುದಿಲ್ಲ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಇನ್ನು 29 ದಿನ ಫುಟ್ಬಾಲ್ ಅಭಿಮಾನಿಗಳು ನಿದ್ದೆ ಮಾಡುವುದಿಲ್ಲ! ಕಣ್ತುಂಬ ದೃಶ್ಯಕಾವ್ಯ!

Exit mobile version