Site icon Vistara News

Murder Case : ವಿಶ್ವ ಕಪ್ ವೇಳೆ ಟಿವಿ ಆಫ್​ ಮಾಡಿದ ಸಿಟ್ಟಿಗೆ ಮಗನನ್ನೇ ಕೊಂದ

Criket team

ಕಾನ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಟಿವಿ ಆಫ್ ಮಾಡಿದ ನಂತರ ನಡೆದ ವಾಗ್ವಾದದ ನಂತರ ಮಗನನ್ನೇ ಕೊಂದ (Murder Case) ತಂದೆಯನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಈ ಘಟನೆ ನಡೆದಿದೆ. ಕೊಲೆಯಾದವ ದೀಪಕ್ ನಿಷಾದ್. ಆತ ತನ್ನ ತಂದೆ ಗಣೇಶ್ ಪ್ರಸಾದ್​ಗೆ ಮೊದಲು ಊಟ ಮಾಡಿ ನಂತರ ಪಂದ್ಯವನ್ನು ವೀಕ್ಷಿಸುವಂತೆ ಒತ್ತಾಯಿಸಿದ್ದ. ಗಣೇಶ್ ಆ ಸಮಯದಲ್ಲಿ ಟಿವಿಯಲ್ಲಿ ಪಂದ್ಯವನ್ನು ನೋಡುವುದರಲ್ಲಿ ಮಗ್ನರಾಗಿದ್ದ. ತಾನು ಊಟ ಮಾಡುವಂತೆ ಕೋರಿಕೊಂಡರೂ ತನ್ನ ಗಮನವನ್ನು ಸೆಳೆಯದ ಕಾರಣ ಕೋಪಗೊಂಡ ದೀಪಕ್ ಟಿವಿಯನ್ನು ಆಫ್ ಮಾಡಿದ್ದ. ಇದರ ಪರಿಣಾಮವಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆಯಿತು. ನಂತರ ಕೈ ಮಿಲಾಯಿಸುವ ತನಕ ಮುಂದುವರಿಯಿತು.

ಇದನ್ನೂ ಓದಿ : U-19 World Cup : ಲಂಕಾ ಕ್ರಿಕೆಟ್ ಮಂಡಳಿಗೆ ಆಘಾತ; ಬೃಹತ್​ ಟೂರ್ನಿಯ ಆತಿಥ್ಯ ನಷ್ಟ

ವ್ಯಗ್ರಗೊಂಡ ಗಣೇಶ್ ತನ್ನ ಮಗನನ್ನು ವಿದ್ಯುತ್ ಕೇಬಲ್ ತಂತಿಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಪರಾಧ ಮಾಡಿದ ನಂತರ ಅವನು ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಕಾನ್ಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಚಕೇರಿ ಪೊಲೀಸ್ ಠಾಣೆಯ ಉಸ್ತುವಾರಿ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಬ್ರಿಜ್ ನಾರಾಯಣ್ ಸಿಂಗ್ ಮಾತನಾಡಿ, ದೀಪಕ್ ಮತ್ತು ಗಣೇಶ್ ಅವರ ಕುಡಿತದ ಅಭ್ಯಾಸ ಇಟ್ಟುಕೊಂಡಿದ್ದರು. ಅವರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವ ವಿವಾದವೇ ಕೊಲೆಗೆ ಕಾರಣ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿಯನ್ನು ಕಸ್ಟಡಿಗೆ ಕಳುಹಿಸಲಾಗಿದ್ದು, ಮೃತ ದೀಪಕ್​ನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ವಿಶ್ವ ದಾಖಲೆ ಬರೆದ ವಿಶ್ವಕಪ್​!

ಮುಂಬಯಿ: ಭಾರತ ಆತಿಥ್ಯದಲ್ಲಿ ನಡೆದ ಈ ಬಾರಿ ಏಕದಿನ ವಿಶ್ವಕಪ್(ICC World Cup 2023)​ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಒಟ್ಟು 46 ದಿನ, 48 ಪಂದ್ಯಗಳನ್ನು ದೇಶದ ಪ್ರಮುಖ 10 ನಗರಗಳಲ್ಲಿ ನಡೆಸಲಾಗಿತ್ತು. ಇದೀಗ ಈ ವಿಶ್ವಕಪ್​ ಟೂರ್ನಿ ವಿಶ್ವ ದಾಖಲೆಯೊಂದನ್ನು ಬರೆದಿದೆ. ಒಟ್ಟಾರೆಯಾಗಿ 12.5 ಲಕ್ಷ (1.25 ಮಿಲಿಯನ್‌) ಪ್ರೇಕ್ಷಕರು ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ಹೇಳಿದೆ. ಇದು ವಿಶ್ವಕಪ್​ ಇತಿಹಾಸದಲ್ಲೇ ದಾಖಲೆಯ ವೀಕ್ಷಣೆ ಎಂಬ ಹಿರಿಮೆ ಪಡೆದಿದೆ.

ಈ ಹಿಂದೆ 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯನ್ನು ಒಟ್ಟು 10.16 ಲಕ್ಷ (1.016 ಮಿಲಿಯನ್‌) ಮಂದಿ ವೀಕ್ಷಿಸಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ. ಈ ಬಾರಿಯ ವಿಶ್ವಕಪ್​ ಅಕ್ಟೋಬರ್‌ 5 ರಿಂದ ಆರಂಭವಾಗಿ ನವೆಂಬರ್ 19 ರಂದು ಕೊನೆಗೊಂಡಿತು. ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಟ ನಡೆಸಿತ್ತು. ಇಲ್ಲಿ ಆಸ್ಟ್ರೇಲಿಯಾ 6 ವಿಕೆಟ್​ಗಳಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತು.

ಒಟ್ಟಾರೆಯಾಗಿ ಈ ಬಾರಿಯ ಏಕದಿನ ವಿಶ್ವಕ‍ಪ್‌ ಪಂದ್ಯ ಅತ್ಯಂತ ಯಶಸ್ಸು ಕಂಡಿದೆ ಎಂದು ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.

ಫೈನಲ್​ ಪಂದ್ಯದ ವೀಕ್ಷಣೆಯಲ್ಲೂ ದಾಖಲೆ

ಭಾನುವಾರ ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫೈನಲ್ ಪಂದ್ಯವನ್ನು 1.3 ಲಕ್ಷ ಮಂದಿ ನೇರವಾಗಿ ವೀಕ್ಷಿಸಿದ್ದಾರೆ. ಇದು ಮಾತ್ರವಲ್ಲದೆ ದೇಶದ ವಿವಿಧ ನಗರಗಳ ಪಿವಿಆರ್​ ಐನಾಕ್ಸ್​ನ 150 ಸಿನಿಮಾ ಮಂದಿರಗಳಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಮಾತ್ರವಲ್ಲದೆ, ಕರ್ನಾಟಕ ಸರ್ಕಾರದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ದೊಡ್ಡ ಪರದೆಯಲ್ಲಿ ಕ್ರಿಕೆಟ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ಬೇರೆ ಬೇರೆ ಕಡೆಗಳಲ್ಲಿ ಇದೇಏ ರೀತಿಯ ಪರದೆಯಲ್ಲಿ ಪಂದ್ಯದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

Exit mobile version