ದುಬೈ: ವಿಶ್ವಶ್ರೇಷ್ಠ ಫುಟ್ಬಾಲಿಗ, ಪೋರ್ಚುಗಲ್ ತಂಡದ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಇದೀಗ ಪುಟ್ಬಾಲ್ನಿಂದ ಹೊರತಾಗಿ ಬೇರೊಂದು ಕ್ಷೇತ್ರದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ರೊನಾಲ್ಡೊ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದ್ದು, ಇದು ತೆರೆ ಕಂಡ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 15 ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬ್ಗಳನ್ನು (subscribers) ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೊ ‘UR Cristiano’ ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದು, ತಮ್ಮ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಟ್ವಿಟರ್ ಎಕ್ಸ್ನಲ್ಲಿ ರೊನಾಲ್ಡೊ ಇದನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ, 15 ಮಿಲಿಯನ್ ಅಭಿಮಾನಿಗಳು ಯೂಟ್ಯೂಬ್ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿದ್ದಾರೆ. ರೊನಾಲ್ಡೊ ಕಿರು ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದು, ಗೆಳತಿ ಮತ್ತು ಮಕ್ಕಳೊಂದಿಗೆ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ಆರಂಭಿಸಿದ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಮೊದಲ ಎರಡು ಗಂಟೆಗಳಲ್ಲೇ ರೊನಾಲ್ಡೊ ವಿಶ್ವ ದಾಖಲೆ ಬರೆದಿದ್ದು, ಯೂಟ್ಯೂಬ್ನ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತ್ಯಂತ ವೇಗವಾಗಿ 1 ಮಿಲಿಯನ್ ಚಂದಾದಾರರನ್ನು ಗಳಿಸಿದ್ದು ಮಾತ್ರವಲ್ಲ, 24 ಗಂಟೆಗಳಲ್ಲಿ ರೊನಾಲ್ಡೊ ಅವರ ಯೂಟ್ಯೂಬ್ ಖಾತೆಯ ಚಂದಾದಾರರ ಸಂಖ್ಯೆ 10 ಮಿಲಿಯನ್‌ಗೆ ತಲುಪಿದೆ, ಇದು ಮತ್ತೊಂದು ವಿಶ್ವ ದಾಖಲೆಯಾಗಿದೆ. ಎಲ್ಲ ಗೋಲ್ಡನ್, ಡೇಮಂಡ್ ಮತ್ತು ಸಿಲ್ವರ್ ಬಟನ್ಗಳನ್ನು ಕೆಲವೇ ಗಂಟೆಗಳಲ್ಲಿ ಪಡೆದುಕೊಂಡಿದ್ದಾರೆ.
ಯೂಟ್ಯೂಬ್‌ನಲ್ಲಿ ವೇಗವಾಗಿ 10 ಮಿಲಿಯನ್ ಚಂದಾದಾರರನ್ನು ಪಡೆದ ದಾಖಲೆಯನ್ನು ಈ ಹಿಂದೆ ಹ್ಯಾಮ್ಸ್ಟರ್ ಕಾಂಬ್ಯಾಟ್ ಹೊಂದಿತ್ತು. ಈ ಮೈಲಿಗಲ್ಲನ್ನು ತಲುಪಲು ಈ ಚಾನಲ್ 7 ದಿನಗಳನ್ನು ತೆಗೆದುಕೊಂಡಿತ್ತು. ಆದರೆ ರೊನಾಲ್ಡೊ ಅವರ ಚಾನಲ್ ಕೆಲವೇ ಗಂಟೆಗಳಲ್ಲಿ ಈ ದಾಖಲೆಯನ್ನು ಪುಟಿಗಡ್ಡಿದೆ.
ಇದನ್ನೂ ಓದಿ Cristiano Ronaldo: ಕಿಂಗ್ಸ್ ಕಪ್ ಫೈನಲ್ನಲ್ಲಿ ಸೋಲು; ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ
ರೊನಾಲ್ಡೊ ಚಾನೆಲ್ ಆರಂಭಿಸಿದ ದಿನವೇ ಅವರ ಪಾರ್ಟ್ನರ್ ಜಾರ್ಜಿನಾ ರೊಡ್ರಿಗಸ್ ಅವರೊಂದಿಗಿನ ರಸಪ್ರಶ್ನೆ ಗೇಮ್ ಸೇರಿಂತೆ ಹಲವು ವೀಡಿಯೊಗಳನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋಗಳು ಕೂಡ ಮಿಲಿಯನ್ಸ್ಗಟ್ಟಲೆ ವೀಕ್ಷಣೆ ಕಾಣುತ್ತಿವೆ. ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನೆಚ್ಚಿನ ಫುಟ್‌ಬಾಲ್ ಬಗ್ಗೆ ನಿರಂತರವಾಗಿ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರೊನಾಲ್ಡೊ ಅವರ ನೆಚ್ಚಿನ ವಿಷಯಗಳು, ಕುಟುಂಬ, ಆರೋಗ್ಯ, ಪೋಷಣೆ, ಶಿಕ್ಷಣ ಮತ್ತು ವೃತ್ತಿಜೀವನದ ಬಗ್ಗೆಯೂ ಮಾತನಾಡಲಿದ್ದಾರೆ ಎನ್ನಲಾಗಿದೆ.