ಕೌನ್ಸಿಲ್ ಬ್ಲಿಫ್ (ಯುಎಸ್): ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಸೂಪರ್-300 ಬ್ಯಾಡ್ಮಿಂಟನ್(US Open 2023) ಪಂದ್ಯಾವಳಿಯಲ್ಲಿ ಭಾರತ ಮಿಶ್ರ ಫಲಿತಾಂಶ ಕಂಡಿದೆ. ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು(PV Sindhu) ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡಿದ್ದಾರೆ. ಆದರೆ ಪುರುಷರ ಸಿಂಗಲ್ಸ್ನಲ್ಲಿ ಕೆನಡಾ ಓಪನ್ ಚಾಂಪಿಯನ್ ಆಗಿರುವ ಲಕ್ಷ್ಯ ಸೇನ್(Lakshya Sen) ಅವರು ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಅವರು ಗಾವೋ ಫಾಂಗ್ ಜೀ ಎದುರು 20-22, 13-21 ನೇರ ಗೇಮ್‌ಗಳಿಂದ ಸೋಲು ಕಂಡರು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ತೃತೀಯ ಶ್ರೇಯಾಂಕದ ಪಿ.ವಿ. ಸಿಂಧು ಕೊರಿಯಾದ ಶುವೊ ಯುನ್ ಅವರನ್ನು 21-14, 21-12 ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆದರೆ ಇಲ್ಲಿ ಸಂಪೂರ್ಣ ವಿಫಲರಾಗಿ ನಿರಾಸೆ ಮೂಡಿಸಿದರು. ಈ ಸೋಲಿನಿಂದಿಗೆ ಸಿಂಧು ಅವರ ವೈಫಲ್ಯ ಮತ್ತೆ ಮುಂದುವರಿಯಿತು. ಕಳೆದದೊಂದು ವರ್ಷಗಳಿಂದ ಸಿಂಧು ಪಾಲ್ಗೊಂಡ ಎಲ್ಲ ಟೂರ್ನಿಯಲ್ಲಿಯೂ ವೈಫಲ್ಯ ಕಂಡಂತಾಗಿದೆ.
ದಿನ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಭಾರತದವೆರೇ ಆದ ಎಸ್. ಶಂಕರ್ ಮುತ್ತುಸ್ವಾಮಿ(S Sankar Muthusamy Subramanian) ಅವರನ್ನು 21-10, 21-17 ನೇರ ಗೇಮ್‌ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶ ಪಡೆದರು. ಹಿಂದಿನ ಪಂದ್ಯದಲ್ಲಿ ಲಕ್ಷ್ಯ ಸೇನ್ ಜೆಕ್ ಗಣ ರಾಜ್ಯದ ಜಾನ್ ಲೌಡ ಅವರನ್ನು 21-8, 23-21ರಿಂದ ಪರಾಭವಗೊಳಿಸಿದ್ದರು. ಶಂಕರ್ ಮುತ್ತುಸ್ವಾಮಿ ಇಸ್ರೇಲ್‌ನ ಮಿಶಾ ಜಿಲ್ಬರ್ಮನ್‌ಗೆ 21-18, 21-23, 21-13 ಅಂಕ ಗಳಿಂದ ಆಘಾತವಿಕ್ಕಿದ್ದರು.
ಇದನ್ನೂ ಓದಿ US Open 2023: ಗೆಲುವಿನ ಶುಭಾರಂಭ ಕಂಡ ಲಕ್ಷ್ಯ ಸೇನ್, ಪಿ.ವಿ. ಸಿಂಧು
ಕಳೆದ ವಾರವಷ್ಟೇ ಕೆನಡಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಕಿರೀಟ ಗೆದ್ದ ಭಾರತದ ಲಕ್ಷ್ಯ ಸೇನ್ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಟೂರ್ನಿಯಲ್ಲಿರುವ ಭಾರತ ಏಕೈಕ ಆಟಗಾರನೂ ಆಗಿದ್ದಾರೆ. ಉಳಿದವರೆಲ್ಲ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.