Site icon Vistara News

US Open 2023: ಗೆಲುವಿನ ಶುಭಾರಂಭ ಕಂಡ ಲಕ್ಷ್ಯ ಸೇನ್, ಪಿ.ವಿ. ಸಿಂಧು

lakshya sen

ಕೌನ್ಸಿಲ್‌ ಬ್ಲಫ್ಸ್‌ (ಅಮೆರಿಕ): ಕಾಮನ್ ವೆಲ್ತ್ ಗೇಮ್ಸ್ ಚಾಂಪಿಯನ್ ಆಟಗಾರ ಭಾರತದ ಲಕ್ಷ್ಯ ಸೇನ್(Lakshya Sen) ಮತ್ತು ಅವಳಿ ಒಲಿಂಪಿಕ್​ ಪದಕ ವಿಜೇತೆ ಪಿ.ವಿ. ಸಿಂಧು(PV Sindhu) ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಸೂಪರ್‌ 300 ಬ್ಯಾಡ್ಮಿಂಟನ್‌(US Open 2023) ಟೂರ್ನಿಯ ಗೆಲುವಿನ ಶುಭಾರಂಭ ಕಂಡಿದ್ದಾರೆ. ಆದರೆ ಸಾಯಿ ಪ್ರಣೀತ್‌ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.

ಗುರುವಾರ ಆರಂಭಗೊಂಡ ಈ ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಕಳೆದ ವಾರವಷ್ಟೇ ಕೆನಡಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಕಿರೀಟ ಗೆದ್ದ ಭಾರತದ ಲಕ್ಷ್ಯ ಸೇನ್​ ಫಿನ್ಲೆಂಡ್‌ನ ಕಲ್ಲ ಕಲ್ಜೋನೆನ್ ಅವರನ್ನು 21-8, 21-16ರಿಂದ ಹಿಮ್ಮೆಟ್ಟಿಸಿ ಅಧಿಕಾರಯುತ ಗೆಲುವು ಸಾಧಿಸಿದರು. ಈ ಹೋರಾಟ ಕೇವಲ 30 ನಿಮಿಷಕ್ಕೆ ಅಂತ್ಯ ಕಂಡಿತು. ಕೆನಡಾ ಓಪನ್​ನಲ್ಲಿ ಲಕ್ಷ್ಯ ಸೇನ್​ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್, ಚೀನಾದ ಲಿ ಶಿ ಫೆಂಗ್ ಅವರನ್ನು 21-18, 22-20 ನೇರ ಗೇಮ್ ಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಮಹಿಳಾ ಸಿಂಗಲ್ಸ್​ನಲ್ಲಿ ಸಿಂಧು ಭಾರತೀಯ ಮೂಲದ ಅಮೆರಿಕನ್ ಆಟಗಾರ್ತಿ ದಿಶಾ ಗುಪ್ತಾ ವಿರುದ್ಧ 21-15, 21-10 ನೇರ ಗೇಮ್​ಗಳಿಂದ ಗೆದ್ದು ದ್ವಿತೀಯ ಸುತ್ತು ಪ್ರವೇಶಿಸಿದರು. ಅರ್ಹತಾ ಸುತ್ತು ದಾಟಿ ಬಂದ ಭಾರತದ ಎಸ್‌.ಶಂಕರ್‌ ಸುಬ್ರಮಣಿಯನ್ ಮೊದಲ ಸುತ್ತಿನಲ್ಲಿ ಐರ್ಲೆಂಡ್‌ನ ನ್ಹಾಟ್‌ ಯಂಗುಯೆನ್ ಅವರನ್ನು 21-11, 21-16 ರಿಂದ ಸೋಲಿಸಿದರು.

ದಿನದ ಮತ್ತೊಂದು ಪುರುಷರ ಸಿಂಗಲ್ಸ್​ ವಿಭಾಗದ ಸ್ಪರ್ಧೆಯಲ್ಲಿ ಸಾಯಿ ಪ್ರಣೀತ್‌ ಅವರು ತೀವ್ರ ಹೋರಾಟ ನಡೆಸಿದರೂ ಚೀನಾದ ಲೀ ಶಿ ಫೆಂಗ್‌ ಎದುರು ಸೋಲನುಭವಿಸಿದರು. ಸೋಲಿನ ಅಂತರ 16-21, 21-14, 21-19.

ಇದನ್ನೂ ಓದಿ Lakshya Sen: ಭಾರತದ ಲಕ್ಷ್ಯ ಸೇನ್‌, ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಚಾಂಪಿಯನ್‌

ಪುರುಷರ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ ಪಂಜಾಲ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಭಾರತದ ಆಟಗಾರರು 14-21, 14-21ರಲ್ಲಿ ಚೀನಾ ತೈಪೆಯ ಲಿನ್‌ ಯು ಚಿಯಾ ಮತ್ತು ಸು ಲಿ ವೀ ಜೋಡಿ ಎದುರು ಪರಾಭವಗೊಂಡರು.

Exit mobile version