ನ್ಯೂಯಾರ್ಕ್: ಅಗ್ರ ಶ್ರೇಯಾಂಕದ ಆಟಗಾರ್ತಿ ಐಗಾ ಸ್ವಿಯಾಟೆಕ್(Iga Swiatek) ಅವರು ಅಮೆರಿಕ ಓಪನ್ ಟೂರ್ನಿಯಲ್ಲಿ(US Open) ಆಘಾತಕಾರಿ ಸೋಲು ಕಂಡಿದ್ದಾರೆ. ವಿಶ್ವದ 21ನೇ ಶ್ರೇಯಾಂಕದ ಆಟಗಾರ್ತಿ ಜೆಲೆನಾ ಒಸ್ಟಾಪೆಂಕೊ(Jelena Ostapenko) ವಿರುದ್ಧ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ 16ರ ಸ್ಪರ್ಧೆಯಲ್ಲಿ 6-3, 3-6, 1-6 ರಿಂದ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಕಳೆದೆರಡು ವರ್ಷಗಳಿಂದ ಆಡಿದ ಪ್ರಮುಖ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಸ್ವಿಯಾಟೆಕ್ ಈ ಟೂರ್ನಿಯಲ್ಲಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದರು. ಆದರೆ 16ನೇ ಸುತ್ತಿನಲ್ಲಿ ಊಹಿಸದ ರೀತಿಯಲ್ಲಿ ಸೋಲು ಕಂಡಿದ್ದಾರೆ. ಸ್ವಿಯಾಟೆಕ್ ಮೊದಲ ಸೆಟ್ನಲ್ಲಿ ಗೆದ್ದಾಗ ಈ ಪಂದ್ಯವನ್ನು ಕೂಡ ಸುಲಭವಾಗಿ ಗೆಲ್ಲುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಳಿಕದ ಎರಡು ಸೆಟ್ನಲ್ಲಿ ಉತ್ಕೃಷ್ಟ ಮಟ್ಟದ ಆಟವಾಡಿದ ಜೆಲೆನಾ ಒಸ್ಟಾಪೆಂಕೊ ಬಲಿಷ್ಠ ಸರ್ವ್ಗಳ ಮೂಲಕ ಅಗ್ರ ಶ್ರೇಯಾಂಕದ ಆಟಗಾರ್ತಿಗೆ ನೀರು ಕುಡಿಸಿದರು. ಈ ಗೆಲುವಿನೊಂದಿಗೆ ಒಸ್ಟಾಪೆಂಕೊ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದರು. ಇದಕ್ಕೂ ಮುನ್ನ ಉಭಯ ಆಟಗಾರ್ತಿಯರು ಒಟ್ಟು ಮೂರು ಭಾರಿ ಮುಖಾಮುಖಿಯಾಗಿದ್ದರು.
“ನಾನು ಯಾವಾಗಲೂ ಐಗಾ ವಿರುದ್ಧ ಕಠಿಣ ಹೋರಾಟವನ್ನು ನಿರೀಕ್ಷಿಸುತ್ತೇನೆ. ಈಗಾಗಲೇ ಐಗಾ ಅನೇಕ ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಗೆದ್ದಿದ್ದಾಳೆ. ಮತ್ತು ಅವಳು ತುಂಬಾ ಸ್ಥಿರವಾಗಿ ಆಡುತ್ತಾಳೆ. ಈ ಪಂದ್ಯದಲ್ಲಿ ಗೆದ್ದರೂ ಕೂಡ ನಾನು ಇನ್ನು ಹೆಚ್ಚಿನ ಆಕ್ರಮಣಕಾರಿ ಆಟವಾಡಬೇಕಿತ್ತು” ಎಂದು ಗೆಲುವಿನ ಬಳಿಕ ಒಸ್ಟಾಪೆಂಕೊ ಹೇಳಿದರು.
ಕಾರ್ಟರ್ ಫೈನಲ್ ಪ್ರವೇಶಿಸಿದ ಜೋಕೊ
ಸರ್ಬಿಯಾದ ಅನುಭವಿ ಆಟಗಾರ ನೊವಾಕ್ ಜೋಕೊವಿಕ್(Novak Djokovic) ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್-ಫೈನಲ್ ಪ್ರವೇಶಿಸಿದ್ದಾರೆ. ಬೋರ್ನಾ ಗಜಾ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಕ್ವಾರ್ಟರ್-ಫೈನಲ್‌ಗೆ ಪ್ರವೇಶಿಸಿದರು. ಭಾನುವಾರ ತಡರಾತ್ರಿ ನಡೆದ 16ರ ಘಟ್ಟದ ಪಂದ್ಯದಲ್ಲಿ ಜೋಕೊ ಅವರು 6-2, 7-5, 6-4 ಅಂತರದಿಂದ ಗೆಲುವು ಸಾಧಿಸಿದರು. ಈ ಪಂದ್ಯ 2 ಗಂಟೆ 26 ನಿಮಿಷಗಳ ಕಾಲ ನಡೆಯಿತು. ಕ್ವಾರ್ಟರ್ ಫೈನಲ್ ಪ್ರವೇಶಿಸುವಂತೆ ಜೋಕೊ ಅವರು ಟೆನ್ನಿಸ್ ದಂತಕಥೆ ರೋಜರ್ ಫೆಡರರ್ ಮತ್ತು ಆಂಡ್ರೆ ಅಗಾಸ್ಸಿ ಅವರ ದಾಖಲೆಯನ್ನು ಸರಿಗಟ್ಟಿದರು. ಒಟ್ಟಾರೆ 13ನೇ ಕ್ವಾರ್ಟರ್-ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು.
ಇದನ್ನೂ ಓದಿ Novak Djokovic: ರ‍್ಯಾಕೆಟ್ ಎಸೆದು ದುರ್ವರ್ತನೆ ತೋರಿದ ಜೋಕೊವಿಕ್ಗೆ ಬಿತ್ತು ಭಾರಿ ಮೊತ್ತದ ದಂಡ
ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಯುಎಸ್ ಓಪನ್ ಪಂದ್ಯಾ ವಳಿಯ 3ನೇ ಸುತ್ತು ದಾಟಿ ಮುನ್ನಡೆ ದಿದ್ದಾರೆ. 21 ವರ್ಷದ ಜಾಕ್ ಡ್ರಾಪರ್ ಅಮೆ ರಿಕದ ಮೈಕಲ್ ಮೋಹ್ ಅವರನ್ನು 6-4, 6-2, 3-6, 6-3ರಿಂದ ಮಣಿಸಿದರು. ಮಹಿಳೆಯರ ಸಿಂಗಲ್ಸ್ನಲ್ಲಿ ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡ್ರುಸೋವಾ ಕೂಡ ಗೆಲುವಿನ ಓಟ ಬೆಳೆಸಿದ್ದು, ಎಕಟೆರಿನಾ ಅಲೆಕ್ಸಾಂಡ್ರೋವಾ ವಿರುದ್ಧ 6-2, 6-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.