ಜಮೈಕಾ: 8 ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ವಿಶ್ವದ ಶ್ರೇಷ್ಠ ಓಟಗಾರ ಜಮೈಕಾದ ಉಸೇನ್ ಬೋಲ್ಟ್(Usain Bolt) ವಂಚನೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ವರದಿ ಪ್ರಕಾರ ಬೋಲ್ಟ್ ಖಾತೆಯಿಂದ ಬರೋಬ್ಬರಿ 12.7 ಮಿಲಿಯನ್ ಡಾಲರ್ ಸುಮಾರು 101 ಕೋಟಿ ರೂಪಾಯಿ ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವಾರವೇ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರು ಇದು ಅಧಿಕೃತಗೊಂಡಿರಲಿಲ್ಲ. ಇದೀಗ ಈ ವಿಚಾರ ನಡೆದದ್ದು ನಿಜ ಎಂದು ತಿಳಿದುಬಂದಿದೆ. ಉಸೇನ್ ಬೋಲ್ಟ್ ಅವರು ಜಮೈಕಾದ ಖಾಸಗಿ ಹೂಡಿಕೆ ಸಂಸ್ಥೆಯ ಖಾತೆಯಲ್ಲಿ ಈ ಹಣವನ್ನು ಜಮಾ ಮಾಡಿದ್ದರು. ಆದರೆ ಇದೀಗ ಬೋಲ್ಟ್ ಜಮಾ ಮಾಡಿದ್ದ ಬಹುತೇಕ ಹಣ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ವಿಚಾರವನ್ನು ಬೋಲ್ಟ್ ಪರ ವಕೀಲರು ಖಚಿತಪಡಿಸಿದ್ದು, ಕಿಂಗ್ಸ್ಟಾನ್, ಜಮೈಕಾ ಸ್ಟಾಕ್ಸ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ಅಕೌಂಟ್ ಹೊಂದಿರುವ ಬೋಲ್ಟ್ ಅವರ ಖಾತೆಯಲ್ಲಿ ಈಗ ಕೇವಲ 12 ಸಾವಿರ ಡಾಲರ್ ಹಣ ಮಾತ್ರ ಉಳಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ಜಮೈಕಾದ ಹಣಕಾಸು ಸೇವಾ ಆಯೋಗವು ತನಿಖೆ ಆರಂಭಿಸಿದೆ. ಭಾರಿ ವಂಚನೆಗೆ ಒಳಗಾಗಿರುವ ಬೋಲ್ಟ್ ಕೂಡ ತನ್ನ ಖಾತೆಯಲ್ಲಿದ್ದ ಎಲ್ಲ ಹಣವನ್ನು 10 ದಿನಗಳಲ್ಲಿ ವಾಪಸ್ ನೀಡುವಂತೆ ಹೂಡಿಕೆ ಸಂಸ್ಥೆಗೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಒಂದೊಮ್ಮೆ ನಿಗದಿತ ಸಮಯದಲ್ಲಿ ಹಣವನ್ನು ಹಿಂದಿರುಗಿಸದಿದ್ದರೆ ಹೂಡಿಕೆ ಸಂಸ್ಥೆ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ | ಶಮಿಯ ಮನೆಗೆ ಬಂತು ದುಬಾರಿ Jaguar F-Type Sports Car