ಬೆಂಗಳೂರು: ನ್ಯೂಜಿಲ್ಯಾಂಡ್ ವಿರುದ್ಧ ಸಾಗುತ್ತಿರುವ ವಿಶ್ವಕಪ್ನ 41ನೇ ಪಂದ್ಯದಲ್ಲಿ ಶ್ರೀಲಂಕಾದ ಕುಸಾಲ್ ಪೆರೇರಾ(Kusal Perera) ಹಾಲಿ ಆವೃತ್ತಿಯ ವಿಶ್ವಕಪ್ನಲ್ಲಿ(Fastest fifties in ODI World Cup 2023) ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ(M.Chinnaswamy Stadium, Bengaluru) ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಲಂಕಾ ನಾಟಕೀಯ ಕುಸಿತ ಕಂಡು ಸಂಕಷ್ಟದಲ್ಲಿದೆ. ತಂಡಕ್ಕೆ ಆಸರೆಯಾದದ್ದು ಕುಸಾಲ್ ಪೆರೇರಾ ಮಾತ್ರ ಅವರು ಕಿವೀಸ್ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಕೇವಲ 22 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಈ ಮೂಲಕ ಪ್ರಸಕ್ತ ವಿಶ್ವಕಪ್ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. ಇದೇ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಟ್ರಾವಿಸ್ ಹೆಡ್ ಅವರ ದಾಖಲೆ ಪತನಗೊಂಡಿತು.
ಕುಸಾಲ್ ಪೆರೇರಾ 22 ಎಸೆತಗಳಿಂದ ಅರ್ಧಶತಕ ಪೂರೈಸಿದರೂ, ಆ ಬಳಿಕದ 6 ಎಸೆತದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 28 ಎಸೆತ ಎದುರಿಸಿದ 51 ರನ್ಗೆ ವಿಕೆಟ್ ಕೈಚೆಲ್ಲಿದರು. ಈ ವಿಕೆಟ್ ಫರ್ಗ್ಯುಸನ್ ಪಾಲಾಯಿತು. ಅವರ ಈ ಅರ್ಧಶತಕದ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ದಾಖಲಾಯಿತು.
ಇದನ್ನೂ ಓದಿ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ
ಹಾಲಿ ವಿಶ್ವಕಪ್ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರರು
ಕುಸಾಲ್ ಪೆರೇರಾ(22 ಎಸೆತ, ನ್ಯೂಜಿಲ್ಯಾಂಡ್ ವಿರುದ್ಧ)
ಟ್ರಾವಿಸ್ ಹೆಟ್(25 ಎಸೆತ, ನ್ಯೂಜಿಲ್ಯಾಂಡ್ ವಿರುದ್ಧ)
ಕುಸಲ್ ಮೆಂಡೀಸ್(25 ಎಸೆತ, ದಕ್ಷಿಣ ಆಫ್ರಿಕಾ ವಿರುದ್ಧ)
ವಿಶ್ವಕಪ್ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಸಾಧಕರು
ಬ್ರೆಂಡನ್ ಮೆಕಲಮ್: 2015ರಲ್ಲಿ ವೆಲ್ಲಿಂಗ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ ಅರ್ಧಶಕ ಬಾರಿಸಿದ್ದರು. ಸದ್ಯ ಇದುವರೆಗಿನ ವಿಶ್ವಕಪ್ ಇತಿಹಾಸದಲ್ಲಿ ಇದು ದಾಖಲೆಯಾಗಿಯೇ ಉಳಿದಿದೆ. ಇದಕ್ಕೂ ಮುನ್ನ 2007ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಕೆನಡಾ ವಿರುದ್ಧ ಇವರು 20 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು.
ಏಂಜಲೋ ಮ್ಯಾಥ್ಯೂಸ್: ಶ್ರೀಲಂಕಾದ ಅನುಭವಿ ಮತ್ತು ಹಿರಿಯ ಆಲ್ ರೌಂಡರ್ ಏಂಜಲೋ ಮ್ಯಾಥ್ಯೂಸ್ ಅವರು 2015ರ ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ 20 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು.
ಅತಿ ವೇಗದ ವಿಶ್ವಕಪ್ ಶತಕ
ವಿಶ್ವಕಪ್ ಟೂರ್ನಿಯಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಹೆಸರಿನಲ್ಲಿದೆ. ಅವರು ಇದೇ ಟೂರ್ನಿಯಲ್ಲಿ ಈ ದಾಖಲೆಯನ್ನು ಬರೆದಿದ್ದರು. 40 ಎಸೆತಗಳಿಂದ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಆಟಗಾರ ಐಡೆನ್ ಮಾರ್ಕ್ರಮ್ ಅವರು 49 ಎಸೆತಗಳಿಂದ ಶತಕ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. 2015ರ ವಿಶ್ವಕಪ್ನಲ್ಲಿ 51 ಎಸೆತಗಳಿಂದ ಮ್ಯಾಕ್ಸ್ವೆಲ್ ಶತಕ ಬಾರಿಸಿದ್ದರು.
ಇದನ್ನೂ ಓದಿ IND vs PAK: ಭಾರತ-ಪಾಕ್ ಸೆಮಿಫೈನಲ್ ಪಂದ್ಯಕ್ಕಿಂತ ದೊಡ್ಡ ಪಂದ್ಯ ಇನ್ನೊಂದಿಲ್ಲ; ಗಂಗೂಲಿ ವಿಶ್ವಾಸ
ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ
ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿದೆ ಅವರು 2015ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 31 ಎಸೆತಗಳಲ್ಲಿ ಶತಕ ಬಾರಿಸಿದ್ದರು. 36 ಎಸೆತಗಳಿಂದ ಶತಕ ಬಾರಿಸಿದ ನ್ಯೂಜಿಲ್ಯಾಂಡ್ನ ಕೋರಿ ಆ್ಯಂಡರ್ಸನ್ ದ್ವಿತೀಯ ಸ್ಥಾನದಲ್ಲಿದ್ದಾರೆ.