ಕರಾಚಿ: ಏಕದಿನ ವಿಶ್ವಕಪ್(ICC World Cup) ಇತಿಹಾಸದಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಇದುವರೆಗೂ ಸೋಲಿಸಿಲ್ಲ. ಆದರೆ ಈ ಬಾರಿ ಈ ದಾಖಲೆ ಪತನಗೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಕಾರ್ ಯೂನಿಸ್ ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನ ತಂಡ ಒತ್ತಡವನ್ನು ನಿಭಾಯಿಸುವ ಕಲೆಯನ್ನು ಸರಿಯಾಗಿ ಕಲಿತಿದೆ ಇದೇ ಕಾರಣಕ್ಕೆ ಈ ಬಾರಿ ಭಾರತವನ್ನು ಮಣಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಯೂನಿಸ್ ಹೇಳಿದ್ದಾರೆ.
ವಿಶ್ವಕಪ್ ವಿಚಾರವಾಗಿ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಅವರು ಈ ಮಾತನ್ನು ಹೇಳಿದರು. “ನಾವು ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಒತ್ತಡಗಳು ಇದ್ದವು. ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದರೂ ಭಾರತ ವಿರುದ್ಧ ವಿಶ್ವಕಪ್ನಲ್ಲಿ ಆಡುವ ವೇಳೆ ಒತ್ತಡ ಎದುರಾಗುತ್ತಿತ್ತು. ಆದರೆ ಈಗ ಈ ಪರಿಸ್ಥಿತಿ ಬದಲಾಗಿದೆ. ಈಗಾಗಲೇ ಪಾಕಿಸ್ತಾನ ತಂಡ ಭಾರತವನ್ನು ಟಿ20 ವಿಶ್ವಕಪ್ನಲ್ಲಿ ಮತ್ತು ಏಷ್ಯಾಕಪ್ನಲ್ಲಿಯೂ ಮಣಿಸಿದೆ. ಹೀಗಾಗಿ ಪಾಕ್ ಗೆಲುವು ಸಾಧಿಸುವುದು ಖಂಡಿತ ಎಂದು ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ.
“ನಮ್ಮಲ್ಲಿ ಪಂದ್ಯ ವಿಜೇತ ಆಟಗಾರರಿದ್ದಾರೆ. ನಾಯಕ ಬಾಬರ್ ಅಜಂ ವೇಗಿ ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಹಲವರು ಏಕಾಂಗಿಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಹಲವು ಆಟಗಾರರ ಪಡೆಯೇ ಇದೆ. ಪಾಕಿಸ್ತಾನ ತಂಡ ಇತ್ತೀಚಿನ ದಿನಗಳಲ್ಲಿ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದೆ. ಭಾರತದ ಪಿಚ್ ಸ್ಪಿನ್ ಆಗಿರುದರಿಂದ ಇದರ ಲಾಭವೂ ಪಾಕ್ಗೆ ಸಿಗಲಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ ICC World Cup 2023: ಪಾಕಿಸ್ತಾನ-ಇಂಗ್ಲೆಂಡ್ ಪಂದ್ಯದ ದಿನಾಂಕವೂ ಬದಲು
ಮೊದಿ ಸ್ಟೇಡಿಯಂನಲ್ಲಿ ಭಾರತ-ಪಾಕ್ ಮುಖಾಮುಖಿ
ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆರಂಭದಲ್ಲಿ ಪಾಕ್ ಈ ಮೈದಾನದಲ್ಲಿ ಪಂದ್ಯ ಆಡುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಆದರೆ ಬಳಿಕ ಐಸಿಸಿ ಅಧಿಕಾರಿಗಳು ಪಾಕ್ ಕ್ರಿಕೆಟ್ ಮಂಡಳಿಯ ಮನವೊಳಿಸಿ ಪಂದ್ಯವನ್ನು ನಿಗದಿಪಡಿಸಿತ್ತು. ಪೂರ್ವ ನಿಗದಿಯಾದಂತೆ ಇತ್ತಂಡಗಳ ನಡುವಿನ ಪಂದ್ಯ ಅಕ್ಟೋಬರ್ 15ಕ್ಕೆ ನಡೆಯಬೇಕಿತ್ತು. ಆದರೆ ಅಕ್ಟೋಬರ್ 15ರಂದು ನವರಾತ್ರಿ ಹಬ್ಬ ಹಾಗೂ ಭದ್ರತೆ ಕಾರಣಗಳಿಂದಾಗಿ ದಿನಾಂಕ ಬದಲಿಸಲು ಬಿಸಿಸಿಐ ತೀರ್ಮಾನಿಸಿತ್ತು. ಈಗ ಐಸಿಸಿ ಹಾಗೂ ಬಿಸಿಸಿಐ ಪ್ರಸ್ತಾಪವನ್ನು ಪಾಕಿಸ್ತಾನ ಒಪ್ಪಿದ ಕಾರಣ ಅಕ್ಟೋಬರ್ 14ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ವಿಶ್ವಕಪ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.