ಸಿಡ್ನಿ: ಪಾಕಿಸ್ತಾನ ವಿರುದ್ಧದ ತವರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ಯಾಲೆಸ್ತೀನಿಯರಿಗೆ ಬೆಂಬಲ ವ್ಯಕ್ತಪಡಿಸಿ ಕೈಗೆ ಕಪ್ಪು ಧರಿಸಿ ಆಡಿದ್ದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ(Usman Khawaja) ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರಿಗೆ ಐಸಿಸಿ(ICC) ಛೀಮಾರಿ ಹಾಕಿದೆ.
ಪಾಕ್ ವಿರುದ್ಧದ ಮೊದಲ ಇನಿಂಗ್ಸ್ ವೇಳೆ ಉಸ್ಮಾನ್ ಖವಾಜಾ, ಗಾಝಾಕ್ಕೆ(Gaza) ಬೆಂಬಲ ಸೂಚಿಸುವ ಸಂದೇಶಗಳನ್ನು ತನ್ನ ಶೂನಲ್ಲಿ ಪ್ರದರ್ಶಿಸಲು ಬಯಸಿದ್ದರು. ‘‘ಸ್ವಾತಂತ್ರ್ಯ ಎನ್ನುವುದು ಮಾನವಹಕ್ಕು’’ ಎಲ್ಲ ಜೀವಗಳು ಸಮಾನ’’ ಎಂಬುದಾಗಿ ಫೆಲೆಸ್ತೀನ್ ಧ್ವಜದ ಬಣ್ಣಗಳಲ್ಲಿ ಬರೆದ ಸಂದೇಶಗಳನ್ನು ಹೊತ್ತ ಶೂಗಳನ್ನು ಟೆಸ್ಟಿಗೂ ಮೊದಲು ನಡೆದ ತರಬೇತಿ ಅವಧಿಯಲ್ಲಿ ಹಾಕಲು ಬಯಸಿದ್ದರು. ಆದರೆ, ಧಾರ್ಮಿಕ, ರಾಜಕೀಯ ಮತ್ತು ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಪ್ರದರ್ಶಿಸುವುದನ್ನು ಐಸಿಸಿ ನಿಯಮಾವಳಿಗಳು ನಿಷೇಧಿಸುವುದರಿಂದ ಆ ಶೂಗಳನ್ನು ಧರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಮೂಲಕ ಗಾಝಾಕ್ಕೆ ಬೆಂಬಲ ಸೂಚಿಸಿ ಕೆಲ ವಿಚಾರವನ್ನು ಹಂಚಿಕೊಂಡಿದ್ದರು.
ಶೂ ಧರಿಸಲು ಸಾಧ್ಯವಾಗದ ಕಾರಣ ಉಸ್ಮಾನ್ ಖವಾಜಾ ಅವರು ಏಕಾಂಗಿಯಾಗಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದ್ದರು. ಇದು ಐಸಿಸಿಯ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅವರ ವಿರುದ್ಧ ಐಸಿಸಿ ವಾಗ್ದಂಡನೆ ಮಾಡಿದೆ. ಈ ರೀತಿಯ ಮೊದಲ ಅಪರಾಧಕ್ಕೆ ವಾಗ್ದಂಡನೆಯಾಗಿದೆ. ಇದೇ ತಪ್ಪು ಮುಂದುವರಿದರೆ ಅವರಿಗೆ ನಿಷೇಧ ಶಿಕ್ಷೆ ವಿಧಿಸಲಾಗುವುದು ಎಂದು ಐಸಿಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ Nathan Lyon: 500 ವಿಕೆಟ್ ಪೂರ್ತಿಗೊಳಿಸಿ ದಿಗ್ಗಜರ ಎಲೈಟ್ ಪಟ್ಟಿ ಸೇರಿದ ಲಿಯಾನ್
ಐಸಿಸಿ ನೀತಿ ಸಂಹಿತೆಯ ಪ್ರಕಾರ, ಯಾವುದೇ ಆಟಗಾರರು ಆಯಾ ಕ್ರಿಕೆಟ್ ಮಂಡಳಿ ಅಥವಾ ಐಸಿಸಿಯಿಂದ ಪೂರ್ವಾನುಮತಿ ಪಡೆಯದೆ ತಾವು ಧರಿಸುವ ಜೆರ್ಸಿ ಅಥವಾ ತಮ್ಮ ಆಟದ ಸಲಕರಣೆಗಳ ಮೇಲೆ ಯಾವುದೇ ಸಂದೇಶಗಳನ್ನು ಪ್ರದರ್ಶಿಸುವಂತಿಲ್ಲ. ವಿಶೇಷವಾಗಿ ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಕಾರಣಗಳಿಗೆ ಸಂಬಂಧಿಸಿದ ಬರಹಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಒಂದೊಮ್ಮೆ ಪ್ರದರ್ಶಿಸಿಸಿದರೆ ಮೊದಲ ಹಂತದ ಶಿಕ್ಷೆಯಾಗಿ ವಾಗ್ದಂಡನೆ ಮಾಡಲಾಗುತ್ತದೆ. ಮತ್ತೆ ಇದು ಪುನರಾವರ್ತಿತವಾದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಪಂದ್ಯ ಗೆದ್ದ ಆಸ್ಟ್ರೇಲಿಯಾ
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತದ ಅಂತರದಿಂದ ಗೆದ್ದು ಬೀಗಿತ್ತು. 360 ರನ್ಗಳ ಭರ್ಜರಿ ಅಂತರದಿಂದ ಗೆದ್ದ ಆಸೀಸ್ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಅವರು ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿ ಮಿಂಚಿದ್ದರು. ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಉಸ್ಮಾನ್ ಖವಾಜಾ ಮೊದಲ ಇನಿಂಗ್ಸ್ನಲ್ಲಿ 41 ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ 90 ರನ್ ಬಾರಿಸಿದ್ದರು.