ಲಖನೌ: ಭಾರತದ ಮಹಿಳೆಯರ ತಂಡ ಭಾನುವಾರ (ಜನವರಿ 29ರಂದು) ನಡೆದ 19 ವಯೋಮಿತಿಯ ಮಹಿಳೆಯರ ಟಿ20 ವಿಶ್ವ ಕಪ್ನ (U19 World Cup) ಟ್ರೋಫಿ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಶಫಾಲಿ ವರ್ಮಾ ನೇತೃತ್ವದ ಟೀಮ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ತಂಡದಲ್ಲಿ ಉತ್ತರ ಪ್ರದೇಶ ಮೂಲದ ಅರ್ಚನಾ ದೇವಿ ಕೂಡ ಇದ್ದಾರೆ. ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಈ ಪ್ರತಿಭೆ ಉನ್ನಾವೊ ಜಿಲ್ಲೆಯ ಪುರ್ವಾ ಎಂಬ ಹಳ್ಳಿಯ ಹುಡುಗಿ. ಅವರ ಕುಟುಂಬ ಅಲ್ಲಿನ ಗುಡಿಸಲಲ್ಲಿ ಜೀವನ ಮಾಡುತ್ತಿದೆ. ಅವರು ಇರುವ ಹಳ್ಳಿಗೆ ನಿರಂತರ ವಿದ್ಯುತ್ ಸಂಪರ್ಕವಿಲ್ಲ. ಪವರ್ ಕಟ್ ಸಮಸ್ಯೆ ಸರ್ವೇ ಸಾಮಾನ್ಯ. ಹೀಗಾಗಿ ಅವರ ಕುಟುಂಬದ ಸದಸ್ಯರಿಗೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಅನುಕೂಲವಾಗುವಂತೆ ಸ್ಥಳೀಯ ಪೊಲೀಸರು ಇನ್ವರ್ಟರ್ ಹಾಗೂ ಬ್ಯಾಟರಿ ವ್ಯವಸ್ಥೆ ಮಾಡಿರುವುದು ವರದಿಯಾಗಿದೆ.
ಭಾನುವಾರ ಸಂಜೆ ವೇಳೆ 19ರ ವಯೋಮಿತಿಯ ವಿಶ್ವ ಕಪ್ನ ಫೈನಲ್ ಪಂದ್ಯ ನಡೆದಿತ್ತು. ಅರ್ಚನಾ ದೇವಿಯ ಮನೆಯಲ್ಲೂ ಟಿವಿ ಹಾಗೂ ಕರೆಂಟ್ ಸೌಲಭ್ಯವಿದೆ. ಒಂದು ವೇಳೆ ಪಂದ್ಯ ನಡೆಯುವ ವೇಳೆ ಕರೆಂಟ್ ಹೋದರೆ ಕುಟುಂಬಸ್ಥರಿಗೆ ಪಂದ್ಯ ನೋಡಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಅಲ್ಲಿನ ಪೊಲೀಸರು ಬ್ಯಾಟರಿ ಹಾಗೂ ಇನ್ವರ್ಟರ್ ಸಮೇತ ಅವರ ಮನೆಗೆ ಹೋಗಿ ಪಂದ್ಯ ವೀಕ್ಷಿಸಲು ಅಡಚಣೆಯಾಗದಂತೆ ನೋಡಿಕೊಂಡಿದ್ದರು.
ಫೈನಲ್ ಪಂದ್ಯದಲ್ಲಿ ಅರ್ಚನಾ ದೇವಿ ಉತ್ತಮ ಪ್ರದರ್ಶನ ನೀಡಿದ್ದರು. ಎರಡು ವಿಕೆಟ್ ಕಬಳಿಸಿರುವ ಅವರು ಇಂಗ್ಲೆಂಡ್ ತಂಡದ ಗರಿಷ್ಠ ಸ್ಕೋರರ್ (19 ರನ್) ರಯಾನಾ ಮೆಕ್ಡೊನಾಲ್ಡ್ ನೀಡಿದ ಅದ್ಭುತ ಕ್ಯಾಚ್ ಹಿಡಿದಿದ್ದರು. ಅದು ಪಂದ್ಯದ ತಿರುವು ಎಂದೂ ಹೇಳಲಾಗುತ್ತಿದೆ.
ಪಂದ್ಯದ ನಡುವೆ ಕರೆಂಟ್ ಹೋಗಬಹುದು ಎಂಬ ಆತಂಕ ನಮಗಿತ್ತು. ಅಕ್ಕ ಕ್ರಿಕೆಟ್ ಆಡುವುದನ್ನು ನೋಡುವ ಅವಕಾಶ ನಮಗೆ ಸಿಗುವುದೇ ಎಂಬ ಭಯವೂ ಇತ್ತು. ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಬ್ಯಾಟರಿ ಹಾಗೂ ಇನ್ವರ್ಟರ್ ಕಳುಹಿಸಿಕೊಟ್ಟರು. ಹೀಗಾಗಿ ನಾವು ಹಳ್ಳಿಯವರೆಲ್ಲರೂ ಸೇರಿಕೊಂಡು ಮನೆಯಿಂದ ಹೊರಗೆ ಕುಳಿತು ಪಂದ್ಯ ವೀಕ್ಷಿಸಿದೆವು ಎಂದು ಅರ್ಚನಾ ದೇವಿಯ ಸಹೋದರ ರೋಹಿತ್ ಮಾಧ್ಯಮದ ಮುಂದೆ ಹೇಳಿದ್ದಾರೆ.
ಇದನ್ನೂ ಓದಿ : U19 World Cup : ವಿಶ್ವ ಕಪ್ ಗೆದ್ದ 19 ವರ್ಷದೊಳಗಿನ ವನಿತೆಯರ ತಂಡಕ್ಕೆ 5 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ
ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲ ಬ್ಯಾಟ್ ಮಾಡಿ 68 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ 14 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 69 ರನ್ ಬಾರಿಸಿ ಜಯಶಾಲಿಯಾಯಿತು. ಇದು ಉದ್ಘಾಟನಾ ಆವೃತ್ತಿಯ ಟೂರ್ನಿಯಾಗಿದ್ದು, ಭಾರತ ತಂಡ ಟ್ರೋಫಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.