ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕದ ಮಾಜಿ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ೧೮ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವೇದಾ ಅವರು ತಮ್ಮ ತಾಯಿಯ ಹುಟ್ಟುಹಬ್ಬದಂದೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಸರಳವಾಗಿ ನಡೆದ ಈ ವಿವಾಹ ಸಮಾರಂಭದ ಫೋಟೊವನ್ನು ವೇದಾ ಕೃಷ್ಣಮೂರ್ತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅರ್ಜುನ್ ಹೊಯ್ಸಳ ಅವರೊಂದಿಗಿನ ಮದುವೆ ಫೋಟೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೇದಾ ಕೃಷ್ಣಮೂರ್ತಿ, ” ಶ್ರೀ ಮತ್ತು ಶ್ರೀಮತಿ, ಅಮ್ಮಾ ನಿನ್ನ ಜ್ಮನದಿನ ಎಂದೆಂದಿಗೂ ವಿಶೇಷವಾಗಿರಲಿದೆ. ಈ ದಿನವನ್ನು ಎಂದಿಗೂ ಮರೆಯಲಾಗುದು” ಎಂದು ಶೀರ್ಷಿಕೆ ನೀಡಿದ್ದಾರೆ. ವೇದಾ ತಾಯಿ ಚೆಲುವಾಂಬ 2021ರಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು.
2011 ರಲ್ಲಿ ಭಾರತ ವನಿತಾ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ವೇದಾ ಕೃಷ್ಣಮೂರ್ತಿ ಅವರು ಟೀಮ್ ಇಂಡಿಯಾ ಪರ 48 ಏಕ ದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ | Veda Krishnamurthy | ಎಂಗೇಜ್ಮೆಂಟ್ ಮಾಡಿಕೊಂಡ ಭಾರತದ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ