Site icon Vistara News

Veda Krishnamurthy: ಕರ್ನಾಟಕ ತಂಡಕ್ಕೆ ವೇದಾ ಕೃಷ್ಣಮೂರ್ತಿ ನಾಯಕಿ

Veda Krishnamurthy

ಬೆಂಗಳೂರು: ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ವೇದಾ ಕೃಷ್ಣಮೂರ್ತಿ(Veda Krishnamurthy) ಅವರು ಜನವರಿ 4ರಿಂದ 16ರವರೆಗೆ ನಡೆಯಲಿರುವ ಬಿಸಿಸಿಐ ಸೀನಿಯರ್‌ ಮಹಿಳೆಯರ ಏಕದಿನ ಕ್ರಿಕೆಟ್‌ ಟ್ರೋಫಿ(2023-24) ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಟೂರ್ನಿ ಭುವನೇಶ್ವರ ಮತ್ತು ಕಟಕ್‌ನಲ್ಲಿ ನಡೆಯಲಿದೆ.

15 ಆಟಗಾರ್ತಿಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬುಧವಾರ ಪ್ರಕಟಿಸಿದೆ. ಅನುಭವಿ ಸ್ಪಿನ್ನರ್​ ರಾಜೇಶ್ವರಿ ಗಾಯಕ್ವಾಡ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜೇಶ್ವರಿ ಇತ್ತೀಚೆಗೆ ಮುಕ್ತಾಯಕ ಕಂಡ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ನಡುವಣ ಏಕೈಕ ಪಂದ್ಯಸ ಟೆಸ್ಟ್​ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು.

ನಾಯಕಿಯಾಗಿರುವ ವೇದಾ ಕೃಷ್ಣಮೂರ್ತಿ ಅವರು ಭಾರತ ತಂಡದ ಪರ ಆಡದೆ 2020ರ ಬಳಿಕ ತಂಡದಲ್ಲಿ ಆಡಿಲ್ಲ. ಆದರೂ ಕೂಡ ಅವರ ಅನುಭವವನ್ನು ಪರಿಗಣಿಸಿ ಅವರಿಗೆ ತಂಡದ ಸಾರಥ್ಯ ನೀಡಲಾಗಿದೆ. ಡಬ್ಲ್ಯುಪಿಎಲ್​ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಇದು ವೇದಾ ಕೃಷ್ಣಮೂರ್ತಿ ಅವರಿಗೆ ಲಭಿಸಿದ ಉತ್ತಮ ವೇದಿಕೆಯಾಗಿದೆ. ಇಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದರೆ ಮತ್ತೆ ಭಾರತ ತಂಡದ ಬಾಗಿಲು ತೆರೆಯಬಹುದು. 31 ವರ್ಷದ ವೇದಾ ಚಿಕ್ಕಮಗಳೂರಿನವರಾಗಿದ್ದು, 18ರ ಹರೆಯದಲ್ಲೇ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವೇದಾ ಮಧ್ಯಮ ಕ್ರಮಾಂಕದ ಬ್ಯಾಟರ್‌ ಹಾಗೂ ಅತ್ಯುತ್ತಮ ಫೀಲ್ಡರ್‌ ಆಗಿದ್ದಾರೆ.

ಇದನ್ನೂ ಓದಿ ಕೊನೆಗೂ ಸೋಲ್ಡ್​ ಆದ ಕನ್ನಡತಿ ವೇದಾ ಕೃಷ್ಣಮೂರ್ತಿ; ಯಾವ ತಂಡಕ್ಕೆ?

ಕರ್ನಾಟಕ ತಂಡ

ವೇದಾ ಕೃಷ್ಣಮೂರ್ತಿ (ನಾಯಕಿ), ದಿವ್ಯಾ ಜ್ಞಾನಾನಂದ, ಸಿ. ಪ್ರತ್ಯೂಷಾ, ವೃಂದಾ ದಿನೇಶ್‌, ಸಹನಾ ಎಸ್‌. ಪವಾರ್‌, ವಿ. ಚಂದು, ನಿಕಿ ಪ್ರಸಾದ್‌, ಪುಷ್ಪಾ ಕಿರೇಸೂರು, ಶಿಶಿರಾ ಎ. ಗೌಡ, ಜಿ.ಆರ್. ಪ್ರೇರಣಾ, ಸಂಜನಾ ಎಚ್. ಬಟ್ನಿ (ವಿಕೆಟ್‌ ಕೀಪರ್‌), ರೋಶಿನಿ ಕಿರಣ್, ರಾಜೇಶ್ವರಿ ಗಾಯಕ್ವಾಡ್​, ಪಿ. ರೋಹಿತಾ ಚೌಧರಿ, ಮಿಥಿಲಾ ವಿನೋದ್. ವಿ.ಆರ್‌. ವನಿತಾ (ಕೋಚ್‌), ಸುನೀತಾ ಅನಂತಕೃಷ್ಣನ್‌ (ಮ್ಯಾನೇಜರ್‌).

ಡಬ್ಲ್ಯುಪಿಎಲ್​ನಲ್ಲಿ ಆಡಲು ಕಾತರ

ಡಿಸೆಂಬರ್​ 9ರಂದು ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024ರ ಹರಾಜಿನಲ್ಲಿ(WPL Auction 2024) ವೇದಾ ಕೃಷ್ಣಮೂರ್ತಿ ಅವರನ್ನು ಗುಜರಾತ್ ಜೈಂಟ್ಸ್ ತಂಡ ಮೂಲ ಬೆಲೆ 30 ಲಕ್ಷ ರೂ. ನೀಡಿ ಖರೀದಿ ಮಾಡಿದೆ. ಆರಂಭಿಕ ಹಂತದ ಬಿಡ್ಡಿಂಗ್​ನಲ್ಲಿ ಅವರು ಅನ್​ಸೋಲ್ಡ್​​ ಆಗಿದ್ದ ಅವರನ್ನು ಬಳಿಕ ದ್ವಿತೀಯ ಸುತ್ತಿನ ಬಿಡ್ಡಿಂಗ್​ನಲ್ಲಿ ಗುಜರಾತ್ ಜೈಂಟ್ಸ್ ತನ್ನ ಪಾಳಯಕ್ಕೆ ಸೇರಿಸಿಕೊಂಡಿತು. ಮೊದಲ ಹಂತದಲ್ಲಿ ಖರೀದಿ ಮಾಡದಿದ್ದಾಗ ನಿರಾಸೆಗೊಂಡಿದ್ದ ಅವರು ಬಳಿಕದ ಸುತ್ತಿನಲ್ಲಿ ಖರೀದಿಯಾದ ಕಾರಣ ಸಂತಸಗೊಂಡಿದ್ದರು.

2011 ರಲ್ಲಿ ಭಾರತ ವನಿತಾ ಕ್ರಿಕೆಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದ ವೇದಾ ಕೃಷ್ಣಮೂರ್ತಿ ಅವರು ಟೀಮ್ ಇಂಡಿಯಾ ಪರ 48 ಏಕ ದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದೇ ವರ್ಷ ಅವರು ಕರ್ನಾಟಕದ ಮಾಜಿ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ಸಪ್ತಪದಿ ತುಳಿದಿದ್ದರು.

Exit mobile version