ಬೆಂಗಳೂರು: ಟೀಮ್ ಇಂಡಿಯಾದ ಕ್ರಿಕೆಟಿಗ, ಕೆಕೆಆರ್ ತಂಡದ ಸೂಪರ್ ಸ್ಟಾರ್ ವೆಂಕಟೇಶ್ ಅಯ್ಯರ್(Venkatesh Iyer Marriage) ಅವರು ತಮ್ಮ ಬಹುಕಾಲದ ಗೆಳತಿ ಶೃತಿ ರಘುನಾಥನ್(Shruti Raghunathan) ಅವರೊಂದಿಗೆ ದಾಂಪತ್ಯ ಬದುಕಿಗೆ ಅಡಿಯಿರಿಸಿದರು. ಭಾನುವಾರ ಈ ಜೋಡಿಯ ವಿವಾಹ ಸಂಪ್ರದಾಯಬದ್ಧವಾಗಿ ನೆರವೇರಿತು. ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಕೆಆರ್ ಫ್ರಾಂಚೈಸಿ ಮತ್ತು ತಂಡದ ಸಹ ಆಟಗಾರರು ಸೇರು ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಈ ಜೋಡಿಗೆ ಶುಭ ಹಾರೈಸಿದ್ದಾರೆ.
ಕಳೆದ ವರ್ಷ ನವೆಂಬರ್ 21, 2023ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಸಪ್ತಪದಿ ತುಳಿದಿದ್ದಾರೆ. ವೆಂಕಟೇಶ್ ಅಯ್ಯರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕೆಕೆಆರ್ ತಂಡದ ಸದ್ಯನಾಗಿದ್ದಾರೆ. ಈ ಬಾರಿ 14 ಪಂದ್ಯಗಳನ್ನಾಡಿ 370 ರನ್ ಬಾರಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?
ವರದಿಗಳ ಪ್ರಕಾರ ಶ್ರುತಿ ಅವರು ಪಿಎಸ್ಜಿ ಕಾಲೇಜ್ ಆಫ್ ಆರ್ಟ್ಸ್ ಆ್ಯಂಡ್ ಸೈನ್ಸ್‌ನಿಂದ ಬಿಕಾಂ ಪದವಿ ಪೂರ್ಣಗೊಳಿಸಿದ್ದಾರೆ. ಭಾರತದ NIFTನಿಂದ ಫ್ಯಾಷನ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿರುವ ಲೈಫ್‌ಸ್ಟೈಲ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮರ್ಚಂಡೈಸ್ ಪ್ಲಾನರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
29 ವರ್ಷದ ವೆಂಕಟೇಶ್ ಅಯ್ಯರ್ ಅವರು ಭಾರತ ಪರ 2 ಏಕದಿನ, 9 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 24 ಮತ್ತು ಟಿ20ಯಲ್ಲಿ 133 ರನ್ ಬಾರಿಸಿದ್ದಾರೆ. ಐಪಿಎಲ್ನಲ್ಲಿ 50 ಪಂದ್ಯಗಳನ್ನು ಆಡಿ 1326 ರನ್ ಗಳಿಸಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಐಪಿಎಲ್ನಲ್ಲಿ ಸಿಕ್ಕ ಯಶಸ್ಸು ಅವರಿಗೆ ಟೀಮ್ ಇಂಡಿಯಾ ಪರ ಸಿಗಲಿಲ್ಲ. ಮಧ್ಯಮ ವೇಗಿಯಾಗಿರುವ ವೆಂಕಿ, ಐಪಿಎಲ್ನಲ್ಲಿ 3, ಭಾರತ ಪರ ಟಿ20ಯಲ್ಲಿ 5 ವಿಕೆಟ್ ಪಡೆದಿದ್ದಾರೆ.