ಬೆಂಗಳೂರು: ಕೆ. ಎಲ್ ರಾಹುಲ್ (KL Rahul) ಟೀಮ್ ಇಂಡಿಯಾ ಪರ ಕಳಪೆ ಪ್ರದರ್ಶನ ನೀಡುತ್ತಿರುವುದು ಭಾರತ ತಂಡದ ಆಯ್ಕೆಗಾರರಿಗೆ ತಲೆನೋವಿನ ಸಂಗತಿಯಾಗಿದೆ. ಒಬ್ಬೊಬ್ಬರಾಗಿಯೇ ಅವರ ವಿರುದ್ಧ ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ. ಇದೀಗ ಕನ್ನಡಿಗ ಹಾಗೂ ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಟೀಕೆ ವ್ಯಕ್ತಪಡಿಸಿದ್ದು, ಎಂಟು ವರ್ಷ ಅಂತಾರಾಷ್ಟ್ರೀಯ ಪಂದ್ಯ ಆಡಿದ ಹೊರತಾಗಿಯೂ ಇಷ್ಟೊಂದು ಕಳಪೆ ಪ್ರದರ್ಶನ ನೀಡುವುದು ಸರಿಯಲ್ಲ ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ಪ್ರದರ್ಶನದ ಕುರಿತು ಅವರು ಸರಣಿ ಟ್ವೀಟ್ ಮಾಡಿದ್ದು, ಅವರ ಬ್ಯಾಟಿಂಗ್ ವೈಖರಿಯನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಅಶ್ವಿನ್ ಅವರಂಥ ನುರಿತ ಆಟಗಾರ ಇರುವ ಹೊರತಾಗಿಯೂ ರಾಹುಲ್ಗೆ ಟೆಸ್ಟ್ ತಂಡದಲ್ಲಿ ಉಪನಾಯಕನ ಸ್ಥಾನ ನೀಡಿರುವ ಕ್ರಮವನ್ನೂ ಪ್ರಶ್ನಿಸಿದ್ದಾರೆ.
ಏನೆಂದಿದ್ದಾರೆ ಪ್ರಸಾದ್
ಕೆ.ಎಲ್ ರಾಹುಲ್ ಅವರ ಪ್ರತಿಭೆಯ ಬಗ್ಗೆ ಗೌರವವಿದೆ. ದುರದೃಷ್ಟವೆಂದರೆ ಅವರ ಪ್ರದರ್ಶನ ಸರಾಸರಿ ಮಟ್ಟಕ್ಕಿಂತ ಕೆಳಗಿದೆ. ಎಂಟು ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಕ್ರಿಕೆಟ್ನಲ್ಲಿ 46 ಪಂದ್ಯಗಳಲ್ಲಿ ಆಡಿದ ಬಳಿಕ ಟೆಸ್ಟ್ ಸರಾಸರಿ 34 ಹೊಂದಿರುವುದು ಕಳಪೆ ಸಾಧನೆ. ಇಷ್ಟೊಂದು ಅವಕಾಶ ಇನ್ಯಾರಿಗೂ ಸಿಕ್ಕಿಲ್ಲ ಎಂಬುದೇ ನನ್ನ ಅನಿಸಿಕೆ. ಶುಭ್ಮನ್ ಗಿಲ್ ಪ್ರದರ್ಶನದ ಉತ್ತುಂಗದಲ್ಲಿರುವ ನಡುವೆ, ಸರ್ಫರಾಜ್ ಖಾನ್ ದೇಶಿಯ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ವೈಭವ ತೋರುತ್ತಿರುವ ನಡುವೆ ರಾಹುಲ್ ಅವರನ್ನು ಪರಿಗಣಿಸಬೇಕಿತ್ತೇ? ಕೆಲವೊಬ್ಬರಿಗೆ ಅದೃಷ್ಟದಿಂದ ಅವಕಾಶ ದೊರೆಯುತ್ತದೆ ಹಾಗೂ ಇದರಿಂದ ಬೇರೆಯವರಿಗೆ ಅವಕಾಶ ನಷ್ಟವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ ವೆಂಕಟೇಶ್ ಪ್ರಸಾದ್.
ಇದನ್ನೂ ಓದಿ : Athiya Shetty | ಶೂಟಿಂಗ್ ವೇಳೆ ಒಟ್ಟಿಗೆ ಕಾಣಿಸಿಕೊಂಡ ನಟಿ ಅಥಿಯಾ ಶೆಟ್ಟಿ- ಕ್ರಿಕೆಟಿಗ ಕೆ ಎಲ್ ರಾಹುಲ್
ಎಲ್ಲದಿಕ್ಕಿಂತಲೂ ಮಿಗಿಲಾಗಿ ರಾಹುಲ್ ಅವರನ್ನು ಟೆಸ್ಟ್ ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಆರ್. ಅಶ್ವಿನ್ ಕ್ರಿಕೆಟ್ ತಂತ್ರ ಉತ್ಕೃಷ್ಟವಾಗಿದ್ದು, ಅವರು ನಿಜವಾಗಿಯೂ ಆ ಸ್ಥಾನಕ್ಕೆ ಅರ್ಹರು. ಅವರು ಅಲ್ಲದಿದ್ದರೂ ಚೇತೇಶ್ವರ್ ಪೂಜಾರ ಅಥವಾ ರವೀಂದ್ರ ಜಡೇಜಾ. ಮಯಾಂಕ್ ಅಗರ್ವಾಲ್ ಟೆಸ್ಟ್ ಮಾದರಿಯಲ್ಲಿ ರಾಹುಲ್ಗಿಂತ ಉತ್ತಮ ಪ್ರದರ್ಶನ ನೀಡುತ್ತಾರೆ. ಹನುಮ ವಿಹಾರಿಯಾದರೂ ಅದಕ್ಕಿಂತ ಉತ್ತಮ. ರಾಹುಲ್ ಅವರ ಆಯ್ಕೆ ಪ್ರದರ್ಶನದ ಮೇಲೆ ನಡೆಯುತ್ತಿಲ್ಲ. ಅವರ ಸ್ವಜನಪಕ್ಷಪಾತದಿಂದ ಅವರಿಗೆ ಅವಕಾಶ ದೊರೆಯುತ್ತಿದೆ. ಕಳೆದ ಎಂಟು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡದ ಹೊರತಾಗಿಯೂ ಅವರನ್ನು ರಕ್ಷಿಸುವ ಕಾಣದ ಕೈಗಳಿವೆ. ಆದರೆ, ನನ್ನ ಕೆಲವು ಮಾಜಿ ಸಹ ಆಟಗಾರರು ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಯಾಕೆಂದರೆ ಅವರಿಗೆ ಐಪಿಎಲ್ನಲ್ಲಿ ಅವಕಾಶ ಸಿಗದಿರುವ ಭಯ. ಫ್ರಾಂಚೈಸಿಯೊಂದರ ತಂಡದ ನಾಯಕನ ಬಗ್ಗೆ ಮಾತನಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಪ್ರಸಾದ್ ಬರೆದಿದ್ದಾರೆ.