Site icon Vistara News

INDvsAUS : ಕೆ ಎಲ್​ ರಾಹುಲ್​ ವಿರುದ್ಧ ಮಗದೊಮ್ಮೆ ಟೀಕೆಗಳ ಪ್ರಹಾರ ನಡೆಸಿದ ವೆಂಕಟೇಶ್​ ಪ್ರಸಾದ್​

Venkatesh Prasad

ಬೆಂಗಳೂರು: ಮುಂಬಯಿಯ ಮಾಜಿ ಕ್ರಿಕೆಟಿಗರು ತಮ್ಮ ರಾಜ್ಯದ ಕ್ರಿಕೆಟಿಗರೇನಾದರೂ ತಂಡದಲ್ಲಿ ವೈಫಲ್ಯ ಎದುರಿಸುತ್ತಿದ್ದರೆ ಅವರ ಬೆಂಬಲವಾಗಿ ನಿಂತು ತಂಡದಿಂದ ತೆಗೆಯದೇ ಇನ್ನಷ್ಟು ಅವಕಾಶಗಳನ್ನು ನೀಡಬೇಕು ಎಂದು ವಾದ ಮಂಡಿಸುತ್ತಾರೆ. ಅದರೆ, ಕನ್ನಡಿಗ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್ (Venkatesh Prasad) ಅವರು ಈ ವಿಚಾರದಲ್ಲಿ ನಿಷ್ಪಕ್ಷಪಾತಿ!. ಕನ್ನಡಿಗರೇ ಆಗಿರುವ ಕೆ. ಎಲ್​ ರಾಹುಲ್ (KL Rahul)​ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿರುವ ನಡುವೆಯೇ ಅವರ ಮೇಲೆ ಟೀಕೆಗಳ ಬಾಣಗಳನ್ನು ಹೂಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ (INDvsAUS) ರಾಹುಲ್​ ಸರಿಯಾಗಿ ಬ್ಯಾಟಿಂಗ್​ ಮಾಡದಿರುವುದನ್ನು ಉಲ್ಲೇಖಿಸಿ ಅವರಿಗೆ ತಂಡದಲ್ಲಿ (Team India) ಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಟೀಕೆ ಮಾಡಿದ್ದ ಅವರು ಫೆಬ್ರವರಿ 20ರಂದು ಹಲವು ಟ್ವೀಟ್​ಗಳನ್ನು ಮಾಡಿದ್ದಾರೆ.

ನವದೆಹಲಿಯಲ್ಲಿ ಫೆಬ್ರವರಿ 19ರಂದು ಟೆಸ್ಟ್​ ಸರಣಿಯ ಎರಡನೇ ಪಂದ್ಯ ಮುಕ್ತಾಯಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ್ದ ಭಾರತ ತಂಡದ ಹೆಡ್​ ಕೋಚ್​ ರಾಹುಲ್​ ದ್ರಾವಿಡ್​, ನಮ್ಮ ಬೆಂಬಲ ರಾಹುಲ್​ಗೆ ಇದೆ. ವಿದೇಶಿ ನೆಲದಲ್ಲಿ ಉತ್ತಮ ಓಪನರ್​ ಎಂದು ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಯ ಹಿನ್ನೆಲೆ ಮಾಜಿ ವೇಗದ ಬೌಲರ್ ವೆಂಕಟೇಶ್​ ಪ್ರಸಾದ್​ ಮತ್ತೊಮ್ಮೆ ಟೀಕೆ ಮಾಡಿದ್ದಾರೆ.

ಕೆ. ಎಲ್​ ರಾಹುಲ್ ಅವರು ವಿದೇಶಿ ನೆಲದಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಅದೇ ನಿಟ್ಟಿನಲ್ಲಿ ನೋಡುವುದಾದರೆ ಅವರು ಸರಾಸರಿ 30ರಲ್ಲಿ ಮಾತ್ರ ಬ್ಯಾಟಿಂಗ್ ಮಾಡಿದ್ದಾರೆ. ಅದರಲ್ಲಿ ಆರು ಶತಕಗಳು ಸೇರಿಕೊಂಡಿವೆ. ಇಲ್ಲೇನು ವಿಶೇಷಗಳಿಲ್ಲ. ಇದೇ ನಿಯಮ ಉಳಿದವರಿಗೆ ಯಾಕೆ ಅನ್ವಯವಾಗುವುದಿಲ್ಲ ಎಂದು ಪ್ರಸಾದ್ ಪ್ರಶ್ನಿಸಿದ್ದಾರೆ.

ವೆಂಕಟೇಶ್​ ಪ್ರಸಾದ್ ಅವರ ಟ್ವೀಟ್​ ಇಲ್ಲಿದೆ

ಶಿಖರ್​ ಧವನ್​ ವಿದೇಶಿ ಪಿಚ್​ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ. 40ರ ಸರಾಸರಿಯಂತೆ ಆಡಿದ್ದು 5 ಶತಕಗಳನ್ನು ಬಾರಿಸಿದ್ದಾರೆ. ಹಾಗಾದರೆ ಅವರನ್ನು ಯಾಕೆ ಅಡಿಸುತ್ತಿಲ್ಲ. ಮಯಾಂಕ್​ ಅಗರ್ವಾಲ್​ 13 ಟೆಸ್ಟ್​ ಪಂದ್ಯಗಳಲ್ಲಿ 70 ಸರಾಸರಿಯನ್ನು ಹೊಂದಿದ್ದಾರೆ. ಎರಡು ದ್ವಿ ಶತಕಗಳನ್ನು ಬಾರಿಸಿದ್ದಾರೆ. ಸದ್ಯ ಅವಕಾಶಕ್ಕಾಗಿ ಕಾಯುತ್ತಿರುವ ಶುಭ್​ಮನ್​ ಗಿಲ್​ ಕೂಡ 37 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಅತ್ಯುತ್ತಮ ಫಾರ್ಮ್​ನಲ್ಲಿ ಕೂಡ ಇದ್ದಾರೆ ಎಂದು ವೆಂಕಟೇಶ್​ ಪ್ರಸಾದ್ ಬರೆದುಕೊಂಡಿದ್ದಾರೆ.

ವಿದೇಶದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ ಎಂಬ ನೆಪ ಅಜಿಂಕ್ಯ ರಹಾನೆಗೂ ಅನ್ವಯವಾಗುತ್ತಿತ್ತು. ಅವರು ವಿದೇಶಿ ನೆಲದಲ್ಲಿ 40 ಸರಾಸರಿ ಹೊಂದಿದ್ದಾರೆ. ಆದಾಗ್ಯೂ ಅವರನ್ನು ತಂಡದಿಂದ ಹೊರಕ್ಕಿಟ್ಟಿರುವುದು ಯಾಕೆ ಎಂದು ಪ್ರಸಾದ್​ ಬರೆದಿದ್ದಾರೆ.

ಇದನ್ನೂ ಓದಿ : KL Rahul : ನಿಮ್ಮಷ್ಟು ಅವಕಾಶ ಇನ್ಯಾರಿಗೂ ಸಿಗದು ಎಂದು ಕೆ. ಎಲ್​ ರಾಹುಲ್​ ತರಾಟೆಗೆ ತೆಗೆದುಕೊಂಡ ವೆಂಕಟೇಶ್​ ಪ್ರಸಾದ್​​

ರಾಹುಲ್ ಅವರನ್ನು ಮುಂದಿನ ಎರಡೂ ಟೆಸ್ಟ್​ಗಳಿಗೆ ತಂಡದಲ್ಲಿ ಉಳಿಸಲಾಗಿದೆ. ಒಂದು ವೇಳೆ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಂಡರೆ ನನ್ನಂಥ ಟೀಕಾಕಾರರಿಗೆ ಉತ್ತರ ಕೊಡಲು ಸೂಕ್ತ ಸಮಯ. ಅಲ್ಲದಿದ್ದರೆ ಅವರು ದೇಶಿಯ ಕ್ರಿಕೆಟ್​ನಲ್ಲಿ ಆಡಿ ಪ್ರದರ್ಶನ ಉತ್ತಮಪಡಿಸಿಕೊಂಡು ಮತ್ತೆ ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆಯಬೇಕು ಎಂಬುದಾಗಿ ವೆಂಕಟೇಶ ಪ್ರಸಾದ್ ಹೇಳಿದ್ದಾರೆ.

Exit mobile version