ಮುಂಬಯಿ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. 110 ಎಸೆತಗಳಲ್ಲಿ ಅಜೇಯ 166 ರನ್ ಬಾರಿಸಿದ ಅವರು ತಮ್ಮಲ್ಲಿನ್ನೂ ಬ್ಯಾಟಿಂಗ್ ಕೆಚ್ಚು ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೊಹ್ಲಿಯ ಆಟಕ್ಕೆ ಎದುರಾಳಿ ತಂಡದವರು ಮಾತ್ರವಲ್ಲ, ಭಾರತ ತಂಡದ ಹಿರಿಯ ಆಟಗಾರರನೇಕರು ಹುಬ್ಬೇರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಆಡುತ್ತಿದ್ದ ಕೊಹ್ಲಿ ಇವರೇನಾ ಎಂದು ಕೇಳುತ್ತಿದ್ದಾರೆ. ಇವೆಲ್ಲದರ ನಡುವೆ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ 100 ಶತಕಗಳನ್ನು ಬಾರಿಸುವುದು ಖಾತರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಗವಾಸ್ಕರ್ ಅವರು, ವಿರಾಟ್ ಕೊಹ್ಲಿ 100 ಶತಕಗಳನ್ನು ಬಾರಿಸುವುದು ಖಂಡಿತ. ಆದಕ್ಕಾಗಿ 5ರಿಂದ 6 ವರ್ಷಗಳ ಕಾಲ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕಾಗುತ್ತದೆ. ಅಂದರೆ ಅವರಿಗೆ 40 ವರ್ಷ ಆಗುವ ತನಕ ತಂಡದಲ್ಲಿ ಇರಬೇಕು ಎಂದು ಹೇಳಿದ್ದಾರೆ.
ಒಂದು ವೇಳೆ 34 ವರ್ಷದ ವಿರಾಟ್ ಕೊಹ್ಲಿ ಮುಂದಿನ 5ರಿಂದ6 ವರ್ಷ ಆಡಲು ಸಾಧ್ಯವಾದರೆ ಅವರು 100 ಶತಕಗಳನ್ನು ಬಾರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ವರ್ಷಕ್ಕೆ ಸರಾಸರಿ 6 ಶತಕಗಳು ಎಂದಾದರೂ ಅವರು ಮುಂದಿನ ಆರು ವರ್ಷಗಳಲ್ಲಿ ಉಳಿದ 26 ಶತಕಗಳನ್ನು ಬಾರಿಸಬಲ್ಲರು ಎಂಬುದಾಗಿ ಗವಾಸ್ಕರ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು 40 ವರ್ಷದ ತನಕ ಆಡಿದ್ದಾರೆ. ಅಲ್ಲಿಯ ತನಕ ಅವರು ಫಿಟ್ನೆಸ್ ಕಾಪಾಡಿಕೊಂಡಿದ್ದರು. ವಿರಾಟ್ ಕೊಹ್ಲಿಯೂ ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿದವರು. ಈಗಲೂ ಅವರು ವಿಕೆಟ್ಗಳ ನಡುವಿನ ಓಡಾಟದಲ್ಲಿ ಅತ್ಯಂತ ವೇಗ ಹೊಂದಿದ್ದಾರೆ. ಧೋನಿಯ ಬಳಿಕ ಅಷ್ಟೊಂದು ವೇಗ ಹೊಂದಿರುವವರು ಕೊಹ್ಲಿ. ಪ್ರಸ್ತುತ ಕ್ರಿಕೆಟ್ನಲ್ಲಿ ವಿಕೆಟ್ ನಡುವಿನ ಓಟಕ್ಕೆ ಹೆಚ್ಚಿನ ಮಹತ್ವವಿದೆ, 1,2 ಹಾಗೂ 3 ರನ್ಗಳಿಗಾಗಿ ಓಡಬೇಕಾಗುತ್ತದೆ. ವಿರಾಟ್ ಕೊಹ್ಲಿ ಈ ವಿಚಾರದಲ್ಲಿ ಚಾಂಪಿಯನ್ ಎಂಬುದಾಗಿ ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ | Team India | ತಮ್ಮ ಶತಕದ ಸಾಧನೆಯ ಹಿಂದೆ ಕುಮಟಾದ ಪ್ರತಿಭೆಯ ಪಾತ್ರವಿದೆ ಎಂದ ವಿರಾಟ್ ಕೊಹ್ಲಿ; ಯಾರು ಅವರು?