ಪುಣೆ: ಹಾಲಿ ಚಾಂಪಿಯನ್ ಇಂಗ್ಲೆಂಡ್(England vs Netherlands) ತಂಡ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ(World Cup 2023 – Points Table) ಭಾರಿ ಬದಲಾವಣೆ ಸಂಭವಿಸಿದೆ. ಇದುವರೆಗೂ ಕೊನೆಯ ಸ್ಥಾನದಲ್ಲಿದ್ದ ಜಾಸ್ ಬಟ್ಲರ್ ಪಡೆ ನೆದರ್ಲೆಂಡ್ಸ್ ವಿರುದ್ಧ ಸಾಧಿಸಿದ 160 ರನ್ಗಳ ಗೆಲುವಿನಿಂದಾಗಿ 3 ಸ್ಥಾನಗಳ ಏರಿಕೆ ಕಂಡು 7ನೇ ಸ್ಥಾನಕ್ಕೇರಿದೆ. ಸೋಲು ಕಂಡ ನೆದರ್ಲೆಂಡ್ಸ್ ಕೊನೆಯ ಸ್ಥಾನಕ್ಕ ಕುಸಿದಿದೆ.
ಚಾಂಪಿಯನ್ಸ್ ಟ್ರೋಫಿ ಆಸೆ ಜೀವಂತ
ಸತತ 6 ಸೋಲಿನಿಂದಾಗಿ ಕಂಗೆಟ್ಟು 10ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ ಪಾಕಿಸ್ತಾನದಲ್ಲಿ ನಡೆಯುವ 2025 ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿತ್ತು. ಆದರೆ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಇದೀಗ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಆಸೆ ಮತ್ತೆ ಚಿಗುರೊಡೆದಿದೆ. ಇಂಗ್ಲೆಂಡ್ಗೆ ಇನ್ನೊಂದು ಪಂದ್ಯ ಬಾಕಿ ಉಳಿದಿದೆ. ಇದನ್ನು ಗೆದ್ದರೆ ಈ ಸ್ಥಾನದಲ್ಲೇ ಮುಂದುವರಿಯಲಿದೆ. ಜತೆಗೆ ಚಾಂಪಿಯನ್ಸ್ ಟ್ರೋಫಿಗೂ ನೇರ ಅರ್ಹತೆ ಪಡೆಯಲಿದೆ.
ಸೋತರೆ ಕಷ್ಟ
ಒಂದೊಮ್ಮೆ ಪಾಕಿಸ್ತಾನ ವಿರುದ್ಧದ ಅಂತಿಮ ಪಂದ್ಯವನ್ನು ಇಂಗ್ಲೆಂಡ್ ಸೋತರೆ, ಅತ್ತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಗೆಲುವು ಸಾಧಿಸಿದರೆ ಇಂಗ್ಲೆಂಡ್ 7ನೇ ಸ್ಥಾನದಿಂದ ಕೆಳಗೆ ಕುಸಿಯುವ ಜತೆಗೆ ಅಧಿಕೃತವಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ.
ವಿಶ್ವಕಪ್ ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 8 | 8 | 0 | 16 | +2.456 |
ದಕ್ಷಿಣ ಆಫ್ರಿಕಾ | 8 | 6 | 2 | 12 | +1.376 |
ಆಸ್ಟ್ರೇಲಿಯಾ | 8 | 6 | 2 | 12 | +0.861 |
ನ್ಯೂಜಿಲ್ಯಾಂಡ್ | 8 | 4 | 4 | 8 | +0.398 |
ಪಾಕಿಸ್ತಾನ | 8 | 4 | 4 | 8 | +0.036 |
ಅಫಘಾನಿಸ್ತಾನ | 8 | 4 | 4 | 8 | -0.338 |
ಇಂಗ್ಲೆಂಡ್ | 8 | 2 | 6 | 4 | -0.885 |
ಬಾಂಗ್ಲಾದೇಶ | 8 | 2 | 6 | 4 | -1.142 |
ಶ್ರೀಲಂಕಾ | 8 | 2 | 6 | 4 | -1.160 |
ನೆದರ್ಲ್ಯಾಂಡ್ಸ್ | 8 | 2 | 6 | 4 | -1.635 |
ಅಗ್ರ 7 ಸ್ಥಾನಗಳಿಗೆ ಅರ್ಹತೆ
ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ. ಈ ಟೂರ್ನಿಯ ಅರ್ಹತಾ ಸುತ್ತನ್ನು ಐಸಿಸಿ ಸಮಿತಿ 2021ರಲ್ಲೇ ಅಂತ್ಯಗೊಳಿಸಿದೆ. ಐಸಿಸಿ ಮಾನದಂಡದ ಪ್ರಕಾರ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಅಗ್ರ 7ರೊಳಗೆ ಸ್ಥಾನ ಪಡೆದ ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿದೆ. 7 ರಿಂದ ಕೆಳಗಿರುವ ತಂಡಗಳು ಟೂರ್ನಿಯಿಂದ ಹೊರಬೀಳಲಿದೆ. ಸದ್ಯ ಇಂಗ್ಲೆಂಡ್ 7ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯ ಗೆದ್ದರೆ ಅರ್ಹತೆ ಪಡೆಯಲಿದೆ. ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರೂ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಖುಷಿಯೊಂದು ಇಂಗ್ಲೆಂಡ್ ಪಾಲಿಗೆ ಸಿಗಲಿದೆ.
ಇದನ್ನೂ ಓದಿ ENG vs NED: ಸತತ 6 ಸೋಲಿನ ಬಳಿಕ ಗೆಲುವು ಕಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್
ಇಂಗ್ಲೆಂಡ್ಗೆ 160 ರನ್ ಗೆಲುವು
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂ ಪುಣೆಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ, ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್(108) ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಒಂದು ಹಂತದವರೆಗೆ ಉತ್ತಮವಾಗಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ಹಠಾತ್ ಕುಸಿತ ಕಂಡು 37.2 ಓವರ್‌ಗಳಲ್ಲಿ 179 ರನ್ಗೆ ಸರ್ವಪತನ ಕಂಡಿತು. ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ತಲಾ ಮೂರು ವಿಕೆಟ್ ಕಿತ್ತು ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.