Site icon Vistara News

Pro Kabaddi | ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾಸ್‌ಗೆ ತಂಡಗಳಿಗೆ ಜಯ

ಪುಣೆ: ಇಲ್ಲಿನ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ವಿವೋ ಪ್ರೋ ಕಬಡ್ಡಿ ಲೀಗ್‌ನ (Pro Kabaddi | ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾಸ್‌ಗೆ ತಂಡಗಳಿಗೆ ಜಯ) ಸೋಮವಾರದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಹಾಗೂ ಯುಪಿ ಯೋಧಾಸ್‌ ತಂಡಗಳು ಜಯ ದಾಖಲಿಸಿವೆ. ಪಾಟ್ನಾ ಪೈರೇಟ್ಸ್‌ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧ 34-28 ಅಂತರದಲ್ಲಿ ಜಯ ಗಳಿಸಿದರೆ ದಿನದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 43-24 ಅಂತರದಲ್ಲಿ ಜಯ ಗಳಿಸಿತು.

ಯುಪಿ ಯೋಧಾಸ್‌ ಜಯದಲ್ಲಿ ಸುರೆಂದರ್‌ ಗಿಲ್‌ (13) ಮತ್ತು ಪ್ರದೀಪ್‌ ನರ್ವಾಲ್‌ (9) ಪ್ರಮುಖ ಪಾತ್ರವಹಿಸಿದರು. ಟ್ಯಾಕಲ್‌ನಲ್ಲಿ ಆಶು ಸಿಂಗ್‌ (5) ಹಾಗೂ ಗುರ್‌ದೀಪ್‌ (6) ಜಯಕ್ಕೆ ನೆರವಾದರು. ಪಾಟ್ನಾ ಪೈರೇಟ್ಸ್‌ ಗೆದ್ದು ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ತಲುಪಿತ್ತು, ಆದರೆ ಯುಪಿ ಯೋಧಾಸ್‌ ಗೆದ್ದ ನಂತರ ಪಾಟ್ನಾ ಪೈರೇಟ್ಸ್‌ ಏಳನೇ ಸ್ಥಾನ ತಲುಪಿದ ಪರಿಣಾಮ ಪೈರೇಟ್ಸ್‌ ಎಂಟನೇ ಸ್ಥಾನಕ್ಕೆ ಕುಸಿಯಿತು.

ಯುಪಿ ಯೋಧಾಸ್‌ ಮುನ್ನಡೆ

ನಿರಂತರ ಸೋಲು ಅನುಭವಿಸುತ್ತಿರುವ ತೆಲುಗು ಟೈಟಾನ್ಸ್‌ ಪಡೆ ಯುಪಿ ಯೋಧಾಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 20-9 ಅಂತರದಲ್ಲಿ ಹಿನ್ನಡೆ ಕಾಣುವುದರೊಂದಿಗೆ ಮತ್ತೊಂದು ಸೋಲಿಗೆ ವೇದಿಕೆ ಹಾಕಿಕೊಂಡಿತು. ಪ್ರದೀಪ್‌ ನರ್ವಾಲ್‌ ಹಾಗೂ ಸುರೇಂದರ್‌ ಗಿಲ್‌ ತಲಾ 7 ರೈಡಿಂಗ್‌ ಅಂಕಗಳನ್ನು ಗಳಿಸುವ ಮೂಲಕ ಯುಪಿ ಯೋಧಾಸ್‌ ಆರಂಭದಿಂದಲೂ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು. ತೆಲುಗು ಟೈಟಾನ್ಸ್‌ ಪರ ಅಭಿಷೇಕ್‌ ಸಿಂಗ್‌ ಹಾಗೂ ಆದರ್ಶ ಟಿ ಗಳಿಸಿದ ತಲಾ 3 ಅಂಕಗಳು ಯುಪಿ ಯೋಧಾಸ್‌ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಪಾಟ್ನಾ ಪೈರೇಟ್ಸ್‌ಗೆ ಜಯ

ಸಚಿನ್‌ ಅವರು ರೈಡಿಂಗ್‌ನಲ್ಲಿ ಸೂಪರ್‌ ಟೆನ್‌ (13) ಸಾಧನೆಯ ನೆರವಿನಿಂದ ಪಾಟ್ನಾ ಪೈರೇಟ್ಸ್‌ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ 34-28 ಅಂತರದಲ್ಲಿ ಜಯ ಗಳಿಸಿದೆ. ಈ ಜಯದೊಂದಿಗೆ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನ ತಲುಪಿದೆ.

ಆಡಿದ 9 ಪಂದ್ಯಗಳಲ್ಲಿ ಮೂರನೇ ಜಯ ದಾಖಲಿಸಿರುವ ಕನ್ನಡಿಗ ಕೋಚ್‌ ರವಿಶೆಟ್ಟಿ ಪಡೆ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿತ್ತು ಮತ್ತು ಎರಡು ಪಂದ್ಯಗಳಲ್ಲಿ ಸಮಬಲ ಸಾಧಿಸಿತ್ತು. ಗುಜರಾತ್‌ ಜಯಂಟ್ಸ್‌ ಪರ ಪ್ರತೀಕ್‌ ದಹಿಯಾ 11 ಅಂಕಗಳನ್ನು ಗಳಿಸಿ ಆಲ್ರೌಂಡ್‌ ಪ್ರದರ್ಶನ ತೋರಿದರೂ ಪೈರೇಟ್ಸ್‌ ಜಯವನ್ನು ನಿಯಂತ್ರಿಸಲಾಗಲಿಲ್ಲ. ರೈಡಿಂಗ್‌ನಲ್ಲಿ ಮಹೇಂದ್ರ ರಜಪೂತ್‌ 9 ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಪ್ರಥಮಾರ್ಧದಲ್ಲಿ ಪೈರೇಟ್ಸ್‌ ಮುನ್ನಡೆ:

ಉತ್ತಮ ಆಲ್ರೌಂಡ್‌ ಪ್ರದರ್ಶನ ತೋರಿದ ಪಾಟ್ನಾ ಪೈರೇಟ್ಸ್‌ ತಂಡ ಗುಜರಾತ್‌ ಜಯಂಟ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 21-13 ಅಂತರದಲ್ಲಿ ಮುನ್ನಡೆ ಕಂಡಿತು. ರೈಡಿಂಗ್‌ನಲ್ಲಿ 12, ಟ್ಯಾಕಲ್‌ನಲ್ಲಿ 4 ಮತ್ತು ಎರಡು ಬಾರಿ ಆಲೌಟ್‌ ಮಾಡುವ ಮೂಲಕ ಪಾಟ್ನಾ ಪೈರೇಟ್ಸ್‌ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು. ಸಚಿನ್‌ ರೈಡಿಂಗ್‌ನಲ್ಲಿ ಮಿಂಚಿದರೆ, ರೋಹಿತ್‌ ಗುಲಿಯಾ ಆಲ್ರೌಂಡ್‌ ಪ್ರದರ್ಶನ ತೋರಿ ತಂಡದ ಮುನ್ನಡೆಗೆ ಕಾರಣರಾದರು. ಗುಜರಾತ್‌ ಜಯಂಟ್ಸ್‌ ಪರ ರೈಡಿಂಗ್‌ನಲ್ಲಿ ಮಹೇಂದರ್‌ ರಜಪೂತ್‌ ಹಾಗೂ ಪ್ರತೀಕ್‌ ದಹಿಯಾ ಉತ್ತಮ ಪೈಪೋಟಿ ನೀಡಿದರು.

ಇದನ್ನೂ ಓದಿ | Pro Kabaddi | ಭರತ್ ಸೂಪರ್‌ ಶೋ; ಡೆಲ್ಲಿಗೆ ಸೋಲುಣಿಸಿ ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್‌

Exit mobile version