Site icon Vistara News

Vijay Hazare | ಕರ್ನಾಟಕ ವಿರುದ್ಧ 5 ವಿಕೆಟ್​ ಗೆಲುವು; ಫೈನಲ್​ಗೆ ಲಗ್ಗೆಯಿಟ್ಟ ಸೌರಾಷ್ಟ್ರ ತಂಡ

Saurashtra won by 5 wkts

ಅಹ್ಮದಾಬಾದ್‌: ವಿಜಯ್ ಹಜಾರೆ ಟ್ರೋಫಿ(Vijay Hazare) ಕೂಟದ ಸೆಮಿಫೈನಲ್ ಪಂದ್ಯದಲ್ಲಿ ಮಯಾಂಕ್​ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಐದು ವಿಕೆಟ್ ಸೋಲು ಕಂಡು ತನ್ನ ಅಭಿಯಾನ ಅಂತ್ಯಗೊಳಿಸಿದೆ. ಜಯ ಸಾಧಿಸಿದ ಸೌರಾಷ್ಟ್ರ ತಂಡವು ಫೈನಲ್ ಪ್ರವೇಶಿಸಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ 49.1 ಓವರ್ ಗಳಲ್ಲಿ 171 ರನ್ ಗಳಿಸಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಸೌರಾಷ್ಟ್ರ 36.2 ಓವರ್​ಗಳಲ್ಲಿ ಐದು ವಿಕೆಟ್​ ನಷ್ಟಕ್ಕೆ 172 ರನ್ ಪೇರಿಸಿ ಗೆಲುವಿನ ನಗೆ ಬೀರಿತು.

ಕರ್ನಾಟಕಕ್ಕೆ ಆರಂಭಿಕ ಆಘಾತ

ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕರ್ನಾಟಕಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಮಯಾಂಕ್​ ಅಗವಾರ್ಲ್​ ಒಂದು ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ತಂಡದ ಮೊತ್ತ 47 ಆಗುವ ವೇಳೆ ತಂಡದ ನಾಲ್ಕು ವಿಕೆಟ್​ ಕಳೆದುಕೊಂಡಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನಿಂತು ಆಡಿದ ಆರ್​. ಸಮರ್ಥ್ 88 ರನ್ ಗಳಿಸಿದರು. ಉಳಿದಂತೆ ಮನೋಜ್ ಭಂಡಗೆ 22 ರನ್ ಗಳಿಸಿದ ಕಾರಣ ತಂಡ 150ರ ಗಡಿ ದಾಟುವಂತಾಯಿತು. ಸೌರಾಷ್ಟ್ರ ಪರ ನಾಯಕ ಜೈದೇವ್​ ಉನಾದ್ಕತ್ ನಾಲ್ಕು ವಿಕೆಟ್ ಪಡೆದರು, ಪ್ರೇರಕ್ ಮಂಕಡ್ ಎರಡು ವಿಕೆಟ್ ಕಿತ್ತರು.

ಜಯ್‌ ಗೋಹಿಲ್‌ ಅರ್ಧಶತಕ

ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ಹಾರ್ವಿಕ್‌ ದೇಸಾಯ್ (0) ಮತ್ತು ಶೆಲ್ಡನ್ ಜಾಕ್ಸನ್ (0) ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಜಯ್ ಗೋಹಿಲ್‌ 82 ಎಸೆತಗಳಲ್ಲಿ 61 ರನ್‌ ಬಾರಿಸಿ ಸೌರಾಷ್ಟ್ರ ತಂಡದ ಗೆಲುವಿಗೆ ನೆರವಾದರು. ಇವರಿಗೆ ಸಮರ್ಥ್‌ ವ್ಯಾಸ್‌ (33) ಮತ್ತು ಪ್ರೇರಕ್ ಮಂಕಡ್‌ (35) ಉತ್ತಮ ಸಾಥ್​ ನೀಡಿದರು. ಕರ್ನಾಟಕ ಪರ ಕೆ. ಗೌತಮ್‌ (50ಕ್ಕೆ 2) ಯಶಸ್ವಿ ಬೌಲರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌

ಕರ್ನಾಟಕ: 49.1 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲ್‌ಔಟ್‌ (ಆರ್‌ ಸಮರ್ಥ್‌ 88, ಮನೋಜ್‌ ಭಾಂಡಗೆ 22; ಜೈದೇವ್​ ಉನಾದ್ಕತ್ 26ಕ್ಕೆ 4).

ಸೌರಾಷ್ಟ್ರ: 36.2 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 172 ರನ್‌ (ಜಯ್‌ ಗೋಹಿಲ್ 61, ಸಮರ್ಥ್ ವ್ಯಾಸ್‌ 33, ಪ್ರೇರಕ್ ಮಂಕಡ್‌ 35, ಕೆ. ಗೌತಮ್ 50ಕ್ಕೆ 2).

ಇದನ್ನೂ ಓದಿ | IND VS NZ | ಮಳೆಯಿಂದ ಅಂತಿಮ ಪಂದ್ಯ ರದ್ದು; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್​

Exit mobile version