ಅಹಮದಾಬಾದ್: ನಾಯಕ ಮಯಾಂಕ್ ಅಗರ್ವಾಲ್(157) ಮತ್ತು ಆರ್. ಸಮರ್ಥ್(123) ಅವರ ಅಮೋಘ ಶತಕದ ನೆರವಿನಿಂದ ಇಂದು ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರ ಎದುರು 222ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕರ್ನಾಟಕ ಅಗ್ರಕ್ರಮಾಂಕದ ಆಟಗಾರರ ವಿಸ್ಫೋಟಕ ಬ್ಯಾಟಿಂಗ್ ಸಾಹಸದಿಂದ ನಿಗದಿತ 50 ಓವರ್ಗಳಲ್ಲಿ 2 ವಿಕೆಟ್ಗೆ 402 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ಆರಂಭದಲ್ಲೇ ಕುಸಿತ ಕಂಡು 30.4 ಓವರ್ಗಳಲ್ಲಿ ಕೇವಲ 180ರನ್ಗೆ ಸರ್ವಪತನ ಕಂಡಿತು.
ದ್ವಿಶತಕದ ಜತೆಯಾಟ
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ಪರ ಆರಂಭಿಕ ಆಟಗಾರರಾದ ಆರ್. ಸಮರ್ಥ್ ಮತ್ತು ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಉಭಯ ಆಟಗಾರರು ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್ಗಳಿಗೆ ಕಾಡಿದರು. 38.5 ಓವರ್ ತನಕ ಕ್ರೀಸ್ ಆಕ್ರಮಿಸಿದ ಈ ಆಟಗಾರರು ಶತಕ ಬಾರಿಸಿ ಸಂಭ್ರಮಿಸಿದರು. ಈ ಜೋಡಿ ಮೊದಲ ವಿಕೆಟ್ಗೆ ಬರೋಬ್ಬರಿ 267 ರನ್ ರಾಶಿ ಹಾಕಿತು. ರವಿಕುಮಾರ್ 120 ಎಸೆತಗಳಲ್ಲಿ 11 ಫೋರ್, 2 ಸಿಕ್ಸರ್ನೊಂದಿಗೆ 123 ರನ್ ಬಾರಿಸಿದರು. ಮಯಾಂಕ್ ಅಗರ್ವಾಲ್ 133 ಎಸೆತಗಳಲ್ಲಿ 11 ಫೋರ್, 8 ಸಿಕ್ಸರ್ನೊಂದಿಗೆ 157 ರನ್ ಚಚ್ಚಿದರು.
ಇದನ್ನೂ ಓದಿ IND vs AUS 1st T20: ಟಾಸ್ ಗೆದ್ದ ಭಾರತ ತಂಡದಿಂದ ಬೌಲಿಂಗ್ ಆಯ್ಕೆ
ಅಗರ್ವಾಲ್ ಮತ್ತು ಸಮರ್ಥ್ ವಿಕೆಟ್ ಬಿದ್ದ ಬಳಿಕ ಬ್ಯಾಟಿಂಗ್ ನಡೆಸಲು ಬಂದ ಪಡಿಕ್ಕಲ್ ಮತ್ತು ಮನೀಷ್ ಪಾಂಡೆ ಜೋಡಿಯೂ ಬಿರುಸಿನ ಆಟಕ್ಕೆ ಒತ್ತುಕೊಟ್ಟಿತು. ಇದರಲ್ಲಿ ಪಡಿಕ್ಕಲ್ ಬ್ಯಾಟಿಂಗ್ ಅಬ್ಬರದಿಂದ ಕೂಡಿತ್ತು. ಕೇವಲ 35 ಎಸೆತಗಳಲ್ಲಿ 4 ಫೋರ್, 5 ಸಿಕ್ಸರ್ನೊಂದಿಗೆ ಅಜೇಯ 71 ರನ್ ಬಾರಿಸಿದರು. ಪಾಂಡೆ ಅಜೇಯ 23 ರನ್ ಗಳಿಸಿದರು. 402 ರನ್ ಕಲೆಹಾಕಿದ ಕರ್ನಾಟಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೊದಲ ಬಾರಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ಬರೆಯಿತು.
ಚೇಸಿಂಗ್ ನಡೆಸಿದ ಜಮ್ಮ ಮತ್ತು ಕಾಶ್ಮೀರ ವಿವ್ರಾಂತ್ ಶರ್ಮಾ(41) ಮತ್ತು ಅಂತಿಮ ಹಂತದಲ್ಲಿ ಯದುವೀರ್ ಸಿಂಗ್ ಚರಕ್(64) ರನ್ ಬಾರಿಸಿದರು. ಇವರನ್ನು ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್ಗಳು ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲಿಲ್ಲ. ಕರ್ನಾಟಕ ಪರ ಬೌಲಿಂಗ್ನಲ್ಲಿ ವಿಜಯ್ ಕುಮಾರ್ ವೈಶಾಕ್ 57 ರನ್ ಬಿಟ್ಟುಕೊಟ್ಟು 4 ವಿಕೆಟ್ ಕೆಡವಿದರು. ಕೃಷ್ಣಪ್ಪ ಗೌತಮ್ 2 ವಿಕೆಟ್ ಕಿತ್ತರು.