Site icon Vistara News

ವಿಜಯ್​ ಹಜಾರೆ ಟೂರ್ನಿಯಲ್ಲಿ 6 ವಿಕೆಟ್​ ಕಿತ್ತು ದಾಖಲೆ ಬರೆದ ಯಜುವೇಂದ್ರ ಚಹಲ್​

Yuzvendra Chahal Vijay Hazare Trophy 2023

ಮುಂಬಯಿ: ಗುರುವಾರ ನಡೆದ ವಿಜಯ್​ ಹಜಾರೆ ಟ್ರೋಫಿಯಲ್ಲಿ(Vijay Hazare Trophy 2023) ಹರಿಯಾಣ ಪರ ಕಣಕ್ಕಿಳಿದ ಟೀಮ್​ ಇಂಡಿಯಾ ಆಟಗಾರ ಯಜುವೇಂದ್ರ ಚಹಲ್(Yuzvendra Chahal)​ ಅವರು 6 ವಿಕೆಟ್ ಕಿತ್ತು ಮಿಂಚಿದ್ದಾರೆ. ಜತೆಗೆ ವಿಶೇಷ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿಗೆ ಬರೆದಿದ್ದಾರೆ.

ಉತ್ತರಾಖಂಡ್ ವಿರುದ್ಧ ಪಂದ್ಯದಲ್ಲಿ ಚಹಲ್​ 10 ಓವರ್‌ ಎಸೆದು 2 ಮೇಡನ್ ಸಹಿತ ಕೇವಲ 26 ರನ್ ನೀಡಿ 6 ವಿಕೆಟ್​ ಉರುಳಿಸಿದರು. ಇದೇ ವೇಳೆ ಅವರು ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ 200 ವಿಕೆಟ್​ಗಳ ಗಡಿ ದಾಟಿದ ಸಾಧನೆ ಮಾಡಿದರು. ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಆಸೀಸ್​ ವಿರುದ್ಧದ ಟಿ20 ಸರಣಿಗೆ ತಮ್ಮನ್ನು ಆಯ್ಕೆ ಮಾಡದ ಬಿಸಿಸಿಐಗೆ ತಮ್ಮ ಬೌಲಿಂಗ್​ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಸಂದೇಶವೊಂದನ್ನು ರವಾನಿದ್ದಾರೆ.

ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಉತ್ತರಾಖಂಡ್ 47.4 ಓವರ್​ಗಳಲ್ಲಿ 207ರನ್​ಗೆ ಸರ್ವಪತನ ಕಂಡಿತು. ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಹರಿಯಾಣ ಯುವರಾಜ್​ ಸಿಂಗ್​(68) ಮತ್ತು ಅಂಕಿತ್​ ಕುಮಾರ್​(49) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ 45 ಓವರ್​ಗಳಲ್ಲಿ 4 ವಿಕೆಟ್​ನಷ್ಟಕ್ಕೆ 208ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಎಮೋಜಿ ಹಾಕಿ ಅಸಮಾಧಾನ ಹೊರಹಾಕಿದ್ದ ಚಹಲ್​

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ(IND vs AUS T20) ಆಯ್ಕೆಯಾಗದ ಯಜುವೇಂದ್ರ ಚಹಲ್(Yuzvendra Chahal)​ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಅಳುತ್ತಿರುವ ಎಮೋಜಿಯನ್ನು ಪೋಸ್ಟ್​ ಮಾಡಿ ಆಯ್ಕೆ ಸಮಿತಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ Yuzvendra Chahal: ಅಶ್ವಿನ್​ಗೆ ಮೆಚ್ಚುಗೆ ಸೂಚಿಸಿ ಆಯ್ಕೆ ಸಮಿತಿಗೆ ಟಾಂಗ್​ ಕೊಟ್ಟ ಚಹಲ್

ಆಸೀಸ್​ ವಿರುದ್ಧದ ಟಿ20 ಸರಣಿಗೆ ಸೋಮವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಏಷ್ಯಾಕಪ್​ ಮತ್ತು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಯಜುವೇಂದ್ರ ಚಹಲ್​, ಸಂಜು ಸ್ಯಾಮ್ಸನ್​ ಮತ್ತು ಭುವನೇಶ್ವರ್​ ಕುಮಾರ್​ ಅವರು ಈ ಸರಣಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಆಯ್ಕೆ ಸಮಿತಿ ಮುಂದಿನ ವರ್ಷದ ಟಿ20 ವಿಶ್ವಕಪ್​ ದೃಷ್ಟಿಯಲ್ಲಿ ಯುವ ಆಟಗಾರರಿಗೆ ಮಣೆ ಹಾಕಿತು. ಇದರಿಂದ ಬೇಸರಗೊಂಡ ಚಹಲ್​ ಅವರು ಪೋಸ್ಟ್​ ಒಂದನ್ನು ಮಾಡುವ ಮೂಲಕ ಪರೋಕ್ಷವಾಗಿ ಬೇಸರ ಹೊರಹಾಕಿದ್ದರು.

ವಿಶ್ವಕಪ್​ಗೆ ಆಯ್ಕೆಯಾಗದಿದ್ದಾಗ ಕೂಡ ಚಹಲ್​ ಅವರು ಇದೇ ರೋತಿಯ ಪೋಸ್ಟ್​ ಮಾಡಿ ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದರು. “ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ, ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ಗಮನವು ಅತ್ಯುತ್ತಮ ಪ್ರದರ್ಶನವನ್ನು ನೀಡುವುದು ಮತ್ತು ನಾನು ಆಟವನ್ನು ಆಡುವವರೆಗೂ ಉತ್ತಮ ಪ್ರದರ್ಶನ ನೀಡುವುದು. ಯಾವುದೇ ಪಂದ್ಯವಾಗಿರಲಿ, ನನ್ನ ಗುರಿ ಶೇಕಡಾ 100 ಉತ್ತಮ ಪ್ರದರ್ಶನ ನೀಡುವುದು. ಆಯ್ಕೆ ನಮ್ಮ ಕೈಯಲ್ಲಿಲ್ಲ “ಎಂದು ಹೇಳಿದ್ದರು. ಇದು ಮಾತ್ರವಲ್ಲದೆ ಆಸೀಸ್​ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಅವರು ಮೂರು ವಿಕೆಟ್​ ಕಿತ್ತ ಸಂದರ್ಭದಲ್ಲಿ ಟ್ವಿಟ್​ ಮಾಡಿ, ಲೆಜೆಂಡರಿ ಆಟಗಾರ ಎಂದು ಹೇಳಬೇಕಿಲ್ಲ ಎಂಬ ಪೋಸ್ಟ್​ ಮಾಡಿದ್ದರು.

Exit mobile version