Site icon Vistara News

ಐಪಿಎಲ್‌ನಲ್ಲಿ ಅವಕಾಶ ಕಳೆದುಕೊಂಡಿರುವ ಕ್ರಿಸ್‌ ಗೇಲ್‌ ಆರ್‌ಸಿಬಿ ಮಾಜಿ ಮಾಲೀಕ ವಿಜಯ್‌ ಮಲ್ಯ ಭೇಟಿಯಾಗಿದ್ದೇಕೆ?

ವಿಜಯ್‌ ಮಲ್ಯ

ಬೆಂಗಳೂರು: ವೆಸ್ಟ್‌ ಇಂಡೀಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಇತ್ತೀಚೆಗೆ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅದರೆ, ಅವರದ್ದು ಸೌಹಾರ್ದ ಭೇಟಿ ಎಂಬುದಾಗಿ ಹೇಳಲಾಗಿದೆ.

42 ವರ್ಷದ ಕೆರಿಬಿಯನ್‌ ಆಟಗಾರ ೨೦೧೧ರಿಂದ ೨೦೧೭ರವರೆಗೆ ಐಪಿಎಲ್‌ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದರು. ಈ ಅವಧಿಯಲ್ಲಿ ಅವರು ಆರ್‌ಸಿಬಿ ಮಾಲೀಕರಾಗಿದ್ದ ವಿಜಯ್‌ ಮಲ್ಯ ಅವರನ್ನು ಭೇಟಿಯಾಗಿದ್ದರು. ಆ ಪರಿಚಯದ ಹಿನ್ನೆಲೆಯಲ್ಲಿ ಭಾರತದಿಂದ ಪರಾರಿಯಾಗಿ ಬ್ರಿಟನ್‌ನಲ್ಲಿ ನೆಲೆಯೂರಿರುವ ವಿಜಯ್‌ ಮಲ್ಯ ಅವರನ್ನು ಭೇಟಿಯಾಗಿರಬಹುದು ಎಂದು ಹೇಳಲಾಗಿದೆ.

ಗೇಲ್‌ ಮೆಚ್ಚಿದ ಮಲ್ಯ

ತಮ್ಮನ್ನು ಭೇಟಿಯಾದ ಕ್ರಿಸ್‌ ಗೇಲ್‌ ಅವರನ್ನು ವಿಜಯ್‌ ಮಲ್ಯ ಮೆಚ್ಚಿ ಮಾತನಾಡಿದ್ದಾರೆ. “ನನ್ನ ಗೆಳೆಯ ಯೂನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್‌ ಅವರು ಮಾತುಕತೆಗೆ ಸಿಕ್ಕರು. ನಾನು ಅವರನ್ನು ಆರ್‌ಸಿಬಿಗೆ ಆಯ್ಕೆ ಮಾಡಿಕೊಂಡ ಬಳಿಕ ಉತ್ತಮ ಗೆಳೆತನ ಹೊಂದಿದ್ದೇವೆ. ಇವರು ಆರ್‌ಸಿಬಿ ಅತ್ಯುತ್ತಮ ಆಯ್ಕೆ ,ʼʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕ್ರಿಸ್‌ ಗೇಲ್‌ ಆರ್‌ಸಿಬಿ ತಂಡದಲ್ಲಿದ್ದಷ್ಟು ದಿನ ಉತ್ತಮ ಪ್ರದರ್ಶನ ತೋರಿದ್ದರು. ಅಲ್ಲದೆ ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡದ ಅವಿಭಾಜ್ಯ ಅಂಗವೇ ಆಗಿದ್ದರು. ಆ ವೇಳೆ ತಂಡದ ನಾಯಕರಾಗಿದ್ದ ವಿರಾಟ್‌ ಕೊಹ್ಲಿ ಜತೆಗೂ ಗೆಳೆತನ ಹೊಂದಿದ್ದರು.

ಆರ್‌ಸಿಬಿ ಪರ ೯೧ ಪಂದ್ಯಗಳನ್ನು ಆಡಿರುವ ಅವರು ೧೫೪. ೪೦ ಸ್ಟ್ರೈಕ್‌ ರೇಟ್‌ನಲ್ಲಿ ೩೪೨೦ ರನ್‌ ಬಾರಿಸಿದ್ದಾರೆ. ಅದರಲ್ಲಿ ೨೧ ಅರ್ಧ ಶತಕಗಳು ಹಾಗೂ ೫ ಶತಕಗಳು ಸೇರಿಕೊಂಡಿವೆ. ಅರ್‌ಸಿಬಿ ಪರ ಅಜೇಯ ೧೭೫ ರನ್‌ ಬಾರಿಸಿರುವುದು ಐಪಿಎಲ್‌ನಲ್ಲಿ ಅವರ ಗರಿಷ್ಠ ರನ್‌ ಎನಿಸಿಕೊಂಡಿದೆ.

ಇದನ್ನೂ ಓದಿ| ಬಟ್ಲರ್ ವಿಧ್ವಂಸಕ ಆಟ, ಹಲವು ದಾಖಲೆ ಧೂಳೀಪಟ!

Exit mobile version