ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics) ಫೈನಲ್ ಪ್ರವೇಶಿಸುವ ಮೂಲಕ ದೇಶಕ್ಕೆ ಐತಿಹಾಸಿಕ ಪದಕವೊಂದನ್ನು ಖಾತ್ರಿಪಡಿಸಿದ್ದ, ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಫೈನಲ್ ಪಂದ್ಯ ಆಡಲು ಕೆವಲೇ ಗಂಟೆಗಳು ಬಾಕಿ ಇರುವಾಗಲೇ ಅವರನ್ನು ಒಲಿಂಪಿಕ್ಸ್ ಸಮಿತಿ ಅನರ್ಹ ಮಾಡಿದೆ. 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಇದೀಗ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣಕ್ಕೆ ಅವರನ್ನು ಫೈನಲ್ನಿಂದ ಅನರ್ಹ ಮಾಡಲಾಗಿದೆ. ಈ ಆಘಾತದಲ್ಲಿರುವ ವಿನೇಶ್ಗೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಾಂತ್ವನ ಹೇಳಿದ್ದಾರೆ.
“ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನಿಮಗೆ ಮಾತ್ರವಲ್ಲದೆ ಇಡೀ ದೇಶವಾಸಿಗಳಿಗೆ ನೋವು ತಂದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ! ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ವಿನೇಶ್ ಫೋಗಟ್ ಅವರನ್ನು ಅನರ್ಹ ಮಾಡಿದ ಕುರಿತು ಭಾರತದ ನಿಯೋಗದಿಂದ ದೂರ ದಾಖಲಿಸಲಾಗಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು, ಆದರೆ ಅವರ ತೂಕ ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಕುಸ್ತಿ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ನಾವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ದೂರು ದಾಖಲಿಸಿದ್ದೇವೆ ಎಂದು ಭಾರತೀಯ ಒಲಿಂಪಿಕ್ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಂಗಳವಾರ ನಡೆದಿದ್ದ ಪ್ರೀ ಕ್ವಾರ್ಟರ್, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯದಲ್ಲಿ ವಿನೇಶ್ ಅವರು ತನಗಿಂತ ಮೇಲಿನ ಶ್ರೇಯಾಂಕದ, ಅದರಲ್ಲೂ ಪ್ರೀ ಕ್ವಾರ್ಟರ್ನಲ್ಲಿ 4 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಸೋಲನ್ನೇ ಕಾಣದ ಕುಸ್ತಿಪಟುವಿಗೆ ಸೋಲುಣಿಸಿದ್ದು ನಿಜಕ್ಕೂ ಸಣ್ಣ ಸಾಧನೆಯಲ್ಲ. 8 ಗಂಟೆಯ ಅಂತರದಲ್ಲಿ ಮೂರು ಗೆಲುವು ಸಾಧಿಸಿ ಅವರು ಫೈನಲ್ ಪ್ರವೇಶಿಸಿದ್ದರು. ಇಡೀ ದಿನದಲ್ಲಿ ಆಡಿದ ಮೂರು ಬೌಟ್‌ಗಳಲ್ಲಿಯೂ ವಿನೇಶ್ ಪಾರಮ್ಯ ಮೆರೆದಿದ್ದರು.
ಇದನ್ನೂ ಓದಿ Paris Olympics: ಐತಿಹಾಸಿಕ ಪದಕ ಗೆಲ್ಲಲಿ ಮೀರಾಬಾಯಿ; ಇಂದು ಬಲಾಢ್ಯರ ಜತೆ ಸ್ಪರ್ಧೆ
ಒಂದೊಮ್ಮೆ ಅವರು ಫೈನಲ್ನಲ್ಲಿ ಸ್ಪರ್ಧಿಸಿ ಪದಕ ಗೆಲ್ಲುತ್ತಿದ್ದರೆ ಇದು ಮಹಿಳಾ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಒಲಿದ 2ನೇ ಪದವಾಗಿರುತ್ತಿತ್ತು. ಇದಕ್ಕೂ ಮುನ್ನ ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಅವರು ಕಂಚು ಗೆದ್ದಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಮಂಡಿನೋವಿನಿಂದ ಸಮಸ್ಯೆಯಾಗಿತ್ತು. 2021ರ ಟೋಕಿಯೊದಲ್ಲಿ ಅನಿರೀಕ್ಷಿತ ಸೋಲು ಕಂಡು ಹೊರಬಿದಿದ್ದರು. ಇದೀಗ ತೂಕ ಹೆಚ್ಚಳ ಅವರ ಚೊಚ್ಚಲ ಒಲಿಂಪಿಕ್ ಪದಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.