Site icon Vistara News

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

Vinesh Phogat

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​​ನ ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ಸ್ಪರ್ಧೆಯಿಂದ ವಿನೇಶ್ ಫೋಗಟ್ (Vinesh Phogat) ಅವರನ್ನು ಅನರ್ಹಗೊಳಿಸಿರುವ ಬಗ್ಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದು, ಅವರಿಗೆ ಬೆಳ್ಳಿ ಪದಕ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ ಫೈನಲ್​ನಿಂದ ಅನರ್ಹಗೊಂಡ ನಂತರ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ಕಳೆದ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್​​ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಫೋಗಟ್ ಚಿನ್ನದ ಪದಕದ ಹೋರಾಟಕ್ಕೆ ಪ್ರವೇಶಿಸಿದ್ದರು. ಅವರು ಚಿನ್ನದ ಪದಕಕ್ಕಾಗಿ ಯುನೈಟೆಡ್ ಸ್ಟೇಟ್ಸ್​​​ನ ಸಾರಾ ಆನ್ ಹಿಲ್ಡೆಬ್ರಾಂಟ್ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದರು ಆದರೆ ತೂಕದ ಮಿತಿ ಉಲ್ಲಂಘಿಸಿದ್ದಕ್ಕಾಗಿ ಬುಧವಾರ ಅನರ್ಹಗೊಂಡರು. ಅನರ್ಹತೆಯ ನಂತರ, ಫೋಗಟ್ ತನಗೆ ಬೆಳ್ಳಿ ಪದಕವನ್ನು ನೀಡುವಂತೆ ಸಿಎಎಸ್​ಗೆ ವಿನಂತಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೌರವ್​ ಗಂಗೂಲಿ, ತನಗೆ ಸರಿಯಾಗಿ ಕುಸ್ತಿಯ ನಿಯಮಗಳು ತಿಳಿದಿಲ್ಲ ಆದರೆ ಅವರು ಬೆಳ್ಳಿ ಪದಕಕ್ಕೆ ಅರ್ಹರು ಎಂದು ಹೇಳಿದ್ದಾರೆ.

ನಿಖರವಾದ ನಿಯಮ ಏನು ಎಂದು ನನಗೆ ತಿಳಿದಿಲ್ಲ, ಆದರೆ ವಿನೇಶ್​​ ಫೈನಲ್​ಗೆ ಹೋಗುವ ತನಕ ಸರಿಯಾಗಿ ಅರ್ಹತೆ ಪಡೆದಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದ್ದರಿಂದ ಫೈನಲ್ ಗೆ ಹೋದ ಮೇಲೆ ಬೆಳ್ಳಿ ಅಥವಾ ಚಿನ್ನದ ಪದಕಕ್ಕೆ ಅರ್ಹರು. ಹೀಗಾಗಿ ಅವರನ್ನು ತಪ್ಪಾಗಿ ಅನರ್ಹಗೊಳಿಸಲಾಗಿದೆ. ಹೀಗಾಗಿ ಅವರು ಕನಿಷ್ಠ ಬೆಳ್ಳಿಗೆ ಅರ್ಹರು,” ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

ಪ್ಯಾರಿಸ್ ಒಲಿಂಪಿಕ್ಸ್​​ನಿಂದ ಅನರ್ಹಗೊಂಡ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ನೀಡಬೇಕೇ ಎಂಬ ಬಗ್ಗೆ ತೀರ್ಪು ನೀಡುವ ಗಡುವನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಆಗಸ್ಟ್ 13 ರವರೆಗೆ ವಿಸ್ತರಿಸಿದೆ.

“ವಿನೇಶ್ ಫೋಗಟ್ ವರ್ಸಸ್ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವಿಷಯದಲ್ಲಿ ಏಕಮಾತ್ರ ಮಧ್ಯಸ್ಥಿಕೆದಾರ ಡಾ.ಅನ್ನಾಬೆಲ್ಲೆ ಬೆನೆಟ್ ಅವರಿಗೆ ಆಗಸ್ಟ್ 13, 2024 ರಂದು ಸಂಜೆ 6-00 ಗಂಟೆಯವರೆಗೆ ನಿರ್ಧಾರ ತೆಗೆದುಕೊಳ್ಳಲು ಸಿಎಎಸ್​ನ ತಾತ್ಕಾಲಿಕ ವಿಭಾಗವು ಸಮಯವನ್ನು ವಿಸ್ತರಿಸಿದೆ” ಎಂದು ಐಒಎ ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್ ಫೈನಲ್​​ನಿಂದ ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಎಕ್ಸ್​ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ನನ್ನ ವಿರುದ್ಧ ಕುಸ್ತಿ ಗೆದ್ದಿತು, ನಾನು ಸೋತೆ. ನನ್ನನ್ನು ಕ್ಷಮಿಸಿ, ಕನಸು ಮತ್ತು ನನ್ನ ಧೈರ್ಯ ಮುರಿದಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರ ಕ್ಷಮೆಗಾಗಿ ನಾನು ಯಾವಾಗಲೂ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದರು.

Exit mobile version