ನವದೆಹಲಿ: ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್‌ನಿಂದ(paris olympics) ಅನರ್ಹಗೊಂಡು ಪದಕ ವಂಚಿತರಾದರೂ ಕೂಡ ದೇಶದ ಹೃದಯ ಗೆದ್ದ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರಿಗೆ ಹರಿಯಾಣ ಸರ್ಕಾರ ವಿಶೇಷ ಗೌರವ ಸೂಚಿಸಲು ನಿರ್ಧರಿಸಿದೆ. ಅವರ ಸಾಧನೆಯನ್ನು ಪರಿಗಣಿಸಿ 1.5 ಕೋಟಿ ರೂ. ನಗುದು ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಘೋಷಿಸಿದ್ದಾರೆ.
“ನಮ್ಮ ವೀರ ಪುತ್ರಿ ಹರಿಯಾಣದ ವಿನೇಶ್ ಫೋಗಟ್ ಪದಕ ಗೆಲ್ಲದಿದ್ದರೂ ಕೂಡ ಅವರು ತೋರಿದ ಅದ್ಭುತ ಪ್ರದರ್ಶನ ನಮಗೆಲ್ಲ ಸ್ಫೂರ್ತಿ. ದೇಶಕ್ಕಾಗಿ ಪದಕ ಗೆಲ್ಲಲು ಅವರು ಪಟ್ಟ ಶಮ್ರ ನಿಜಕ್ಕೂ ಮನಕಲಕುವಂತಿದೆ. ಕೆಲವು ಕಾರಣಗಳಿಂದ ಆಕೆಗೆ ಒಲಿಂಪಿಕ್ ಫೈನಲ್ನಲ್ಲಿ ಆಡಲು ಸಾಧ್ಯವಾಗದೇ ಇರಬಹುದು, ಆದರೆ, ಆಕೆ ನಮಗೆಲ್ಲ ಚಾಂಪಿಯನ್ ಆಗಿದ್ದಾಳೆ. ವಿನೇಶ್ ತವರಿಗೆ ಮರಳಿದ ತಕ್ಷಣ ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ಮತ್ತು ಗೌರವಿಸಲು ನಮ್ಮ ಸರ್ಕಾರ ನಿರ್ಧರಿಸಿದೆ” ಎಂದು ನಯಾಬ್ ಸಿಂಗ್ ಸೈನಿ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತರಿಗೆ ನೀಡುವ ಎಲ್ಲ ಗೌರವಗಳು, ಪುರಸ್ಕಾರಗಳು ಮತ್ತು ಸೌಲಭ್ಯಗಳನ್ನು ನಮ್ಮ ಸರ್ಕಾರ ವಿನೇಶ್ ಫೋಗಟ್ ಅವರಿಗೆ ಕೃತಜ್ಞತೆಯಿಂದ ನೀಡಲು ತೀರ್ಮಾನ ಕೈಗೊಂಡಿದೆ. ಅಷ್ಟೇ ಅಲ್ಲದೇ, ಸರ್ಕಾರದ ವತಿಯಿಂದ 1.5 ಕೋಟಿ ನಗದು ಬಹುಮಾನ ನೀಡುತ್ತೇವೆ ಎಂದು ಸಿಎಂ ಸೈನಿ ಹೇಳಿದ್ದಾರೆ. ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ನಗದು ಮೊತ್ತ ನೀಡುವುದಾಗಿ ಈ ಹಿಂದೆಯೇ ಹರಿಯಾಣ ಸರ್ಕಾರ ಘೋಷಣೆ ಮಾಡಿತ್ತು.
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಅನರ್ಹಗೊಂಡು ಆಘಾತಕ್ಕೀಡಾಗಿರುವ ಕುಸ್ತಿಪಟು ವಿನೇಶ್ ಫೋಗಾಟ್ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಟ್ವಿಟ್ ಮಾಡಿ ‘ನೀವು ಭಾರತದ ಹೆಮ್ಮೆ ಮತ್ತು ದೇಶದ ಪ್ರತಿಯೊಬ್ಬರನ್ನೂ ಸ್ಫೂರ್ತಿಗೊಳಿಸಿದ್ದೀರಿ’ ಎಂದು ಸಾಂತ್ವನ ಹೇಳಿದ್ದಾರೆ.
ವಿನೇಶ್ ಫೋಗಟ್ ತಮ್ಮನ್ನು ಅನರ್ಹ ಮಾಡಿದ ನಿರ್ಧಾರದ ವಿರುದ್ಧ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ (ಸಿಎಎಸ್)ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜಂಟಿ ಬಳ್ಳಿಪದಕವನ್ನು ನೀಡುವಂತೆ ಕೋರಿದ್ದಾರೆ. ಗುರುವಾರ ಈ ಮೇಲ್ಮನವಿ ಬಗ್ಗೆ ಮಧ್ಯಂತರ ತೀರ್ಪು ನೀಡುವ ನಿರೀಕ್ಷೆ ಇದ್ದು, ಮೂಲ ನಿರ್ಧಾರವನ್ನು ಬದಲಿಸುವ ಸಾಧ್ಯತೆಯೂ ಇದೆ. ಒಲಿಂಪಿಕ್ ಕೂಟದ ಕಟ್ಟುನಿಟ್ಟಿನ ಸಂರಚನೆ ಕಾರಣದಿಂದಾಗಿ ಚಿನ್ನದ ಪದಕಕ್ಕೆ ಸ್ಪರ್ಧಿಸುವ ಅವಕಾಶವನ್ನು ನೀಡುವ ಸಾಧ್ಯತೆ ಕಡಿಮೆ. ಏಕೆಂದರೆ ಚಿನ್ನದ ಪದಕಕ್ಕಾಗಿ ಇರುವ ಸ್ಪರ್ಧೆಯ ಮರು ವೇಳಾಪಟ್ಟಿ ಸಿದ್ಧಪಡಿಸುವುದು ಸವಾಲುದಾಯಕ. ಆದರೆ ಅಧಿಕೃತ ಪ್ರಸಾರಸಂಸ್ಥೆಯಾಗಿರುವ ಜಿಯೊಸಿನಿಮಾ ಪ್ರಕಾರ, ವಿನೇಶ್ ಜಂಟಿ ಬೆಳ್ಳಿಪದಕಕ್ಕಾಗಿ ಮನವಿ ಸಲ್ಲಿಸಿದ್ದಾರೆ.
ಸಿಎಎಸ್ ಎನ್ನುವುದು 1984ರಲ್ಲಿ ಸ್ಥಾಪಿತವಾದ ಸ್ವತಂತ್ರ ಸಂಸ್ಥೆಯಾಗಿದ್ದು, ಕ್ರೀಡಾಸಂಬಂಧಿ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುತ್ತದೆ. ಸ್ವಿಡ್ಜರ್ಲೆಂಡ್ ನ ಲೌಸನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಎಎಸ್, ನ್ಯೂಯಾರ್ಕ್ ಹಾಗೂ ಸಿಡ್ನಿಯಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಹೊಂದಿದ್ದು, ಒಲಿಂಪಿಕ್ ಆತಿಥ್ಯ ವಹಿಸುವ ದೇಶಗಳಲ್ಲಿ ತಾತ್ಕಾಲಿಕ ಕೋರ್ಟ್ ಗಳನ್ನು ಹೊಂದಿರುತ್ತದೆ.