ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಕುಸ್ತಿಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಪದಕವೊಂದನ್ನು ಗೆಲ್ಲುವು ನಿರೀಕ್ಷೆಯಲಿದ್ದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರನ್ನು ಒಲಿಂಪಿಕ್ಸ್ ಸಮಿತಿ ಅನರ್ಹ ಮಾಡಿದೆ. 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಇದೀಗ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣಕ್ಕೆ ಅವರನ್ನು ಫೈನಲ್ನಿಂದ ಅನರ್ಹ(Vinesh Phogat Disqualified) ಮಾಡಲಾಗಿದೆ. ಅವರ ಈ ಹಿನ್ನಡೆಗೆ ತೂಕ ಬದಲಾವಣೆಯೂ ಕಾರಣವಾಗಿರಬಹುದೆಂಬ ಚರ್ಚೆಗಳು ಇದೀಗ ಶುರುವಾಗಿದೆ. ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ, ಫರ್ಹಾನ್ ಅಖ್ತರ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಕುಸ್ತಿಪಟುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “ವಿನೇಶ್ ಫೋಗಟ್ ನೀವು ಇಡೀ ದೇಶಕ್ಕೆ ಸ್ಫೂರ್ತಿ. ನಿಮ್ಮ ಸ್ಥೈರ್ಯವನ್ನು , ನಿಮ್ಮ ಧೈರ್ಯವನ್ನು ಯಾವುದೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮತ್ತು ಇತಿಹಾಸವನ್ನು ಸೃಷ್ಟಿಸಲು ನೀವು ಅನುಭವಿಸಿದ ಕಷ್ಟಗಳನ್ನು ಯಾವುದೂ ತೆಗೆದುಹಾಕುವುದಿಲ್ಲ! ನಾವು ನಿಮ್ಮೊಂದಿಗೆ ಇರುತ್ತೇವೆ. ನೀವೇ ಚಿನ್ನ – ನೀವೆ ಕಬ್ಬಿಣ ಮತ್ತು ನೀವೆ ಸ್ಟೀಲ್! ಯಾವುದೂ ನಿಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ! ಯುಗಗಳ ಚಾಂಪಿಯನ್! ನಿಮ್ಮಂತೆ ಯಾರೂ ಇಲ್ಲʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actor Dhanush: ಧನುಷ್ ನಟನೆಯ ʻ50ʼನೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?
ಫರ್ಹಾನ್ ಅಖ್ತರ್ ಅವರು ಪೋಸ್ಟ್‌ನಲ್ಲಿ ವಿನೇಶ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮತ್ತು ಶೀರ್ಷಿಕೆಯಲ್ಲಿ ಬರೆದಿದ್ದಾರೆ, ” ವಿನೇಶ್ ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ ಮತ್ತು ನೀವು ಕ್ರೀಡೆಗಾಗಿ ಮಾಡಿದ್ದೀರಿʼʼ ಎಂದು ಬರೆದುಕೊಂಡಿದ್ದಾರೆ.
ಜೋಯಾ ಅಖ್ತರ್ “ಚಾಂಪಿಯನ್ ನೀವು ಚಿನ್ನ! ನೀವು ಸಾಧಿಸಿದ್ದು ಪದಕಗಳನ್ನು ಮೀರಿದ್ದು. ತುಂಬಾ ಹೆಮ್ಮೆ. ಸ್ಫೂರ್ತಿʼʼಎಂದು ಬರೆದುಕೊಂಡಿದ್ದಾರೆ. ವಿಕ್ಕಿ ಕೌಶಲ್ “ಪದಕಗಳನ್ನು ಮೀರಿದ ವಿಜೇತೆ ಎಂದು ಬರೆದುಕೊಂಡಿದ್ದಾರೆ.
ತಾಪ್ಸಿ ಪನ್ನು “ಇದು ಹೃದಯವಿದ್ರಾವಕವಾಗಿದೆ. ಆದರೆ ಪ್ರಾಮಾಣಿಕವಾಗಿ ಈ ಮಹಿಳೆ ಈಗಾಗಲೇ ಚಿನ್ನವನ್ನು ಮೀರಿ ತನ್ನ ಛಾಪು ಮೂಡಿಸಿದ್ದಾರೆರೆ!” ಸೋನಾಕ್ಷಿ ಸಿನ್ಹಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹೀಗೆ ಬರೆದಿದ್ದಾರೆ, “ನಂಬಲಾಗುತ್ತಿಲ್ಲ! ನನಗೆ ಊಹಿಸಲು ಸಾಧ್ಯವಿಲ್ಲ ಮತ್ತು ನೀವು ಯಾವಾಗಲೂ ಚಾಂಪಿಯನ್ ಆಗಿರುತ್ತೀರಿ. ಹೇಳಬೇಕೆಂದು ನನಗೆ ತಿಳಿದಿಲ್ಲʼʼಎಂದು ಬರೆದುಕೊಂಡಿದ್ದಾರೆ.
ವಿನೇಶ್ 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ನಡೆದಿದ್ದ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿಯೂ ವಿನೇಶ್ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿದ್ದರು. ಆದರೆ, 50 ಕೆಜಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಅವರು ಕಣಕ್ಕಿಳಿದ್ದರು. ಇದೀಗ ತೂಕ ಬದಲಿಸಿದ್ದೇ ಅವರ ಈ ಹಿನ್ನಡೆಗೆ ಕಾರಣ ಎಂದರೂ ತಪ್ಪಾಗಲಾರದು.
ಒಲಿಂಪಿಕ್ಸ್ ಸ್ಪರ್ಧೆಗೂ ಮುನ್ನ ವಿನೇಶ್ ಅವರ ತೂಕ 2 ಕೆಜಿ ಹೆಚ್ಚಳವಾಗಿತ್ತು. ಇದನ್ನು ಕಡಿಮೆ ಮಾಡಲೆಂದೆ ಅವರು ನಿದ್ದೆ, ಆಹಾರ ಬಿಟ್ಟು ಅತ್ಯಂತ ಕಠಿಣ ವ್ಯಾಯಾಮ ನಡೆಸಿ ಸುಮಾರು 1.90 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ 100 ಗ್ರಾಂ ಹೆಚ್ಚಳದಿಂದ ಇದೀಗ ಅವರ ಒಲಿಂಪಿಕ್ಸ್ ಪದಕದ ಕನಸು ನುಚ್ಚುನೂರಾಗಿದೆ. ಒಂದೊಮ್ಮೆ ಅವರು ತಮ್ಮ ಈ ಹಿಂದಿನಂತೆ 53 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ ಈ ಹಿನ್ನಡೆ ಉಂಟಾಗುತ್ತಿರಲಿಲ್ಲ.