ನವದೆಹಲಿ: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಪೋಗಟ್(Vinesh Phogat) ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ ಅಭಿಮಾನಿಗಳನ್ನು ಕಂಡ ತಕ್ಷಣ ಜೋರಾಗಿ ಅಳುತ್ತಾ ಕೈ ಮುಗಿದು ಧನ್ಯವಾದ ತಿಳಿಸಿದರು. ಕುಟುಂಬದ ಸದಸ್ಯರು, ಮಾಜಿ ಒಲಿಂಪಿನ್, ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ಈ ವೇಳೆ ಜತೆಗಿದ್ದರು.
ವಿಮಾನ ನಿಲ್ದಾಣದಿಂದ ಹೊರ ಬಂದ ತಕ್ಷಣ ವಿನೇಶ್ ಸಾಕ್ಷಿ ಮಲಿಕ್ ಅವರ ಎದೆಗಪ್ಪಿಕೊಂಡು ಕಣ್ಣೀರು ಸುರಿಸಿದ ದೃಶ್ಯ ಕಂಡು ಒಂದು ಕ್ಷಣ ನೆರದಿದ್ದ ಕ್ರೀಡಾಭಿಮಾನಿಗಳು ಕೂಡ ಅತ್ಯಂತ ಭಾವುಕರಾಗಿ ನಿಂತು ಬಿಟ್ಟರು.ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದಲ್ಲಿ ಉತ್ಕೃಷ್ಟ ಪ್ರದರ್ಶನ ತೋರುವ ಮೂಲಕ ಫೈನಲ್ ತಲುಪಿದ್ದ ವಿನೇಶ್ ಅವರು ಇನ್ನೇನು ಫೈನಲ್ ಆಡಲು ಕೆಲವೇ ಗಂಟೆಗಳು ಬಾಕಿ ಇರುವಾಗ ಅವರನ್ನು ಅನರ್ಹ ಎಂದು ಘೋಷಿಸಲಾಯಿತು. ದೇಹತೂಕದಲ್ಲಿ ನಿಗದಿತ ಸ್ಪರ್ಧೆಯ ತೂಕಕ್ಕಿಂತ 100 ಗ್ರಾಂ ಹೆಚ್ಚಾದ ಕಾರಣಕ್ಕೆ ಅವರು ಅನರ್ಹಗೊಂಡಿದ್ದರು.
ಸೆಮಿಫೈನಲ್ ವೇಳೆ ವಿನೇಶ್ 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್ ನಡೆಸಿ, ಸ್ಕಿಪ್ಪಿಂಗ್ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.
ಹರಿಯಾಣ ಸರ್ಕಾರ ವಿನೇಶ್ಗೆ ವಿಶೇಷ ಗೌರವ ಸೂಚಿಸುವುದಾಗಿ ಘೋಷಣೆ ಮಾಡಿತ್ತು. ದಿಲ್ಲಿಯಿಂದ ಬಂದೊಡಣೆ ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ಇಲ್ಲಿನ ಸರ್ಕಾರ ಸಲಕ ಸಿದ್ಧತೆ ನಡೆಸಿದೆ. ವಿಜೇತರಂತೆ ಸ್ವಾಗತಿಸಲು ಮತ್ತು ಗೌರವಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಈಗಾಗಲೇ ಘೋಷಿಸಿದ್ದಾರೆ.
ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿ ತವರಿಗೆ ಮರಳಿರುವ ಭಾರತದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದರು. ಈ ವೇಳೆ ವಿನೇಶ್ ಫೋಗಟ್ ಸಾಧನೆ ಕುರಿತು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ವಿನೇಶ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಅನರ್ಹಗೊಂಡ ಬೇಸರದಲ್ಲೇ ವಿನೇಶ್ ಕುಸ್ತಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿನೇಶ್ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (ಸಿಎಎಸ್) ತಿರಸ್ಕರಿಸಿತ್ತು. ಹೋಗಾಗಿ ಕೊನೆಯ ಆಸೆ ಕೂಡ ಕಮರಿಹೋಗಿದೆ. ಕಳೆದ ವರ್ಷ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ನಡೆಸಿದ್ದ ಮುಷ್ಕರದಲ್ಲಿ ವಿನೇಶ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.