ನವ ದೆಹಲಿ : ಏಷ್ಯನ್ ಗೇಮ್ಸ್ ಕುಸ್ತಿ ಸ್ಪರ್ಧೆಗೆ ನೇರ ಟಿಕೆಟ್ ಪಡೆಯುವ ಮೂಲಕ ವಿವಾದದ ಒಳಗಾಗಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆಯ ನಂತರ ಏಷ್ಯನ್ ಗೇಮ್ಸ್ 2023 ತಂಡಕ್ಕೆ ನೇರ ಪ್ರವೇಶ ಪಡೆದ ಫೋಗಟ್ ಮೊಣಕಾಲು ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿಕೊಳ್ಳುವ ಮೂಲಕ ಟೂರ್ನಿಯಿಂದ ತಪ್ಪಿಸಿಕೊಂಡಿದ್ದಾರೆ. ಅವರ ನಿರ್ಧಾರದಿಂದಾಗಿ ಆಯ್ಕೆ ಮಂಡಳಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಅಂತಿಮ್ ಫಂಗಲ್ ಅವರಿಗೆ ಇದು ಒಳ್ಳೆಯ ಸುದ್ದಿ ಸಿಕ್ಕಿದಂತಾಗಿದೆ. ಅವರು ಈಗ ಭಾರತ ಏಷ್ಯನ್ ಗೇಮ್ಸ್ ಕುಸ್ತಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
2018 ರ ಆವೃತ್ತಿಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ವಿನೇಶ್ ಫೋಗಟ್ ಅವರು ಆಗಸ್ಟ್ 13ರಂದು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆಗಸ್ಟ್ 17 ರಂದು ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಅವರು ಮುಂದಿನ ತಿಂಗಳು ಪಟಿಯಾಲದಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತಾ ವಿಶ್ವ ಚಾಂಪಿಯನ್ಷಿಪ್ ಟ್ರಯಲ್ಸ್ನಿಂದ ಹೊರಗುಳಿಯಲಿದ್ದಾರೆ.
ವಿನೇಶ್ ಫೋಗಟ್ಗೆ ಶಸ್ತ್ರಚಿಕಿತ್ಸೆ
ನಾನು ಅತ್ಯಂತ ದುಃಖದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕೆಲವು ದಿನಗಳ ಹಿಂದೆ ಆಗಸ್ಟ್ 13, 2023 ರಂದು, ತರಬೇತಿಯ ಸಮಯದಲ್ಲಿ ನನ್ನ ಎಡ ಮೊಣಕಾಲಿಗೆ ಗಾಯವಾಯಿತು. ಸ್ಕ್ಯಾನ್ ಮತ್ತು ಪರೀಕ್ಷೆಗಳನ್ನು ಮಾಡಿದ ನಂತರ, ದುರದೃಷ್ಟವಶಾತ್, ನಾನು ಚೇತರಿಸಿಕೊಳ್ಳಲು ಶಸ್ತ್ರಚಿಕಿತ್ಸೆಯೊಂದೇ ಆಯ್ಕೆ ಎಂದು ವೈದ್ಯರು ಹೇಳಿದ್ದಾರೆ” ಎಂದು ವಿನೇಶ್ ಫೋಗಟ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ನಾನು ಆಗಸ್ಟ್ 17 ರಂದು ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ. 2018ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಉಳಿಸಿಕೊಳ್ಳುವುದು ನನ್ನ ಕನಸಾಗಿತ್ತು. ಆದರೆ ದುರದೃಷ್ಟವಶಾತ್, ಈ ಗಾಯವು ಈಗ ನನ್ನ ಭಾಗವಹಿಸುವಿಕೆಯನ್ನು ತಳ್ಳಿಹಾಕಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಂಗಲ್ ಮತ್ತು ಸುಜಿತ್ ಕಲ್ಕಲ್ ಅವರು ವಿನೇಶ್ ಮತ್ತು ಬಜರಂಗ್ ಪೂನಿಯಾ ಅವರಿಗೆ ಕ್ರೀಡಾಕೂಟಕ್ಕೆ ನೇರ ಅರ್ಹತೆ ಕೊಟ್ಟಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ಟ್ರಯಲ್ಸ್ನಲ್ಲಿ ಗೆದ್ದಿದ್ದರು
ಪಂಗಲ್ 53 ಕೆ.ಜಿ ವಿಭಾಗದ ಟ್ರಯಲ್ಸ್ನಲ್ಲಿ ಗೆದ್ದರೆ, ವಿಶಾಲ್ ಕಾಳಿರಾಮನ್ 65 ಕೆಜಿ ವಿಭಾಗದಲ್ಲಿ ವಿಜೇತರಾಗಿದ್ದರು. ಇಬ್ಬರನ್ನೂ ಕ್ರೀಡಾಕೂಟಕ್ಕೆ ಮೀಸಲು ಆಟಗಾರರಾಗಿ ಹೆಸರಿಸಲಾಗಿತ್ತು. ಪ್ರಸ್ತುತ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ನಡೆಸುತ್ತಿರುವ ತಾತ್ಕಾಲಿಕ ಸಮಿತಿಯ ನಿರ್ಧಾರವನ್ನು ಕುಸ್ತಿ ಕ್ಷೇತ್ರವು ಟೀಕಿಸಿತ್ತು. ವಿನೇಶ್ ಮತ್ತು ಪೂನಿಯಾ ಅವರಿಗೆ ಏಷ್ಯನ್ ಗೇಮ್ಸ್ ಟ್ರಯಲ್ಸ್ನಿಂದ ವಿನಾಯಿತಿ ನೀಡಿರುವುದು ಭಾರಿ ವಿವಾದ ಸೃಷ್ಟಿಸಿತ್ತು. ಇದೀಗ 28 ವರ್ಷದ ವಿನೇಶ್ ಸೆಪ್ಟೆಂಬರ್ 23 ರಂದು ಹ್ಯಾಂಗ್ಝೌನಲ್ಲಿ ಪ್ರಾರಂಭವಾಗುವ ಕ್ರೀಡಾ ಚಟುವಟಿಕೆಯ ಭಾಗವಾಗಿರುವುದಿಲ್ಲ.
ಹರಿಯಾಣದ ಸಿಸಾಯಿ ಗ್ರಾಮದಲ್ಲಿ ನಡೆದ ಖಾಪ್ ಪಂಚಾಯತ್ ಇತ್ತೀಚೆಗೆ ಪಂಗಲ್ ಮತ್ತು ಕಾಳಿರಾಮನ್ ಅವರನ್ನು ಭಾರತೀಯ ತಂಡಕ್ಕೆ ಸೇರಿಸಲು ಒಲವು ತೋರಿತ್ತು.
ಮೀಸಲು ಆಟಗಾರನನ್ನು ಏಷ್ಯನ್ ಕ್ರೀಡಾಕೂಟಕ್ಕೆ ಕಳುಹಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ವಿನೇಶ್ ಹೇಳಿಕೊಂಡಿದ್ದಾರೆ. ಅಂಡರ್-20 ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಲು ಜೋರ್ಡಾನ್ನಲ್ಲಿರುವ 19 ವರ್ಷದ ಪಂಗಲ್ ಈಗ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ : ಕುತೂಹಲ ಕೆರಳಿಸಿದ ಕುಸ್ತಿ ಒಕ್ಕೂಟದ ಚುನಾವಣೆ; ಕ್ರೀಡಾ ಸಚಿವರನ್ನು ಭೇಟಿಯಾದ ಕುಸ್ತಿಪಟುಗಳು
ಪ್ಯಾರಿಸ್ 2024ರ ಒಲಿಂಪಿಕ್ಸ್ಗೆ ತಯಾರಿ ನಡೆಸಲು ನಾನು ಶೀಘ್ರದಲ್ಲೇ ಪುನರಾಗಮನವನ್ನು ಮಾಡಲು ಮತ್ತು ಪ್ಯಾರಿಸ್ 2024 ಒಲಿಂಪಿಕ್ಸ್ಗೆ ತಯಾರಿ ನಡೆಸಬೇಕಾಗಿದೆ. ನನ್ನ ಅಭಿಮಾನಿಗಳು ಬೆಂಬಲ ಮುಂದುವರಿಸಬೇಕು ಎಂದು ಅವರು ಕೋರಿಕೊಂಡಿದ್ದಾರೆ.
ಪುನಿಯಾ ತಮ್ಮ ತರಬೇತಿಯನ್ನು ಪುನರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಅವರು ಸೋನಿಪತ್ನಲ್ಲಿರು ನೌಕಾಪಡೆಯ ರಾಯ್ಪುರ ತರಬೇತಿ ಕೇಂದ್ರದಲ್ಲಿ ಅಭ್ಯಾಸ ನಡೆಸಿದರು.
ಏಷ್ಯನ್ ಗೇಮ್ಸ್ ಕುಸ್ತಿ ಭಾರತ ತಂಡ
ಗ್ರೀಕೋ-ರೋಮನ್
- ಜ್ಞಾನೇಂದರ್ – 60 ಕೆ.ಜಿ.
- ನೀರಜ್ – 67 ಕೆ.ಜಿ.
- ವಿಕಾಸ್ – 77 ಕೆ.ಜಿ.
- ಸುನಿಲ್ ಕುಮಾರ್ – 87 ಕೆ.ಜಿ.
- ನರೀಂದರ್ ಚೀಮಾ – 97 ಕೆ.ಜಿ.
- ನವೀನ್ – 130 ಕೆ.ಜಿ.
ಮಹಿಳಾ ಫ್ರೀಸ್ಟೈಲ್
- ಪೂಜಾ ಗೆಹ್ಲೋಟ್ – 50 ಕೆಜಿ
- ವಿನೇಶ್ ಫೋಗಟ್ – 53 ಕೆಜಿ (ಆಂಟಿಮ್ ಪಂಗಲ್ ಸ್ಟ್ಯಾಂಡ್ಬೈ)
- ಮಾನ್ಸಿ ಅಹ್ಲಾವತ್ – 57 ಕೆಜಿ
- ಸೋನಮ್ ಮಲಿಕ್ – 62 ಕೆ.ಜಿ.
- ರಾಧಿಕಾ – 68 ಕೆ.ಜಿ.
- ಕಿರಣ್ – 76 ಕೆ.ಜಿ.
ಪುರುಷರ ಫ್ರೀಸ್ಟೈಲ್
- ಅಮನ್ ಶೆರಾವತ್ – 57 ಕೆಜಿ
- ಬಜರಂಗ್ ಪೂನಿಯಾ – 65 ಕೆಜಿ (ವಿಶಾಲ್ ಕಾಳಿರಾಮನ್ ಸ್ಟ್ಯಾಂಡ್ಬೈ)
- ಯಶ್ – 74 ಕೆ.ಜಿ.
- ದೀಪಕ್ ಪೂನಿಯಾ – 86 ಕೆ.ಜಿ.
- ವಿಕ್ಕಿ – 97 ಕೆಜಿ
- ಸುಮಿತ್ – 125 ಕೆ.ಜಿ.