ಡೆಹ್ರಾಡೂನ್: ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ (Virat-Anushka) ಬುಧವಾರ ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ದಂಪತಿಯು ಉತ್ತರಾಖಂಡದಲ್ಲಿರುವ ಆಶ್ರಮವೊಂದಕ್ಕೆ ಭೇಟಿ ನೀಡಿ, ಅಲ್ಲಿನವರಿಗೆ ಹೊದಿಕೆಗಳನ್ನು ವಿತರಿಸಿದ್ದಾರೆ.
ಇದನ್ನೂ ಓದಿ: Rishabh Pant Car Accident | ಕಾರು ಅಪಘಾತದಲ್ಲಿ ಗಾಯಗೊಂಡ ಪಂತ್ ಚೇತರಿಕೆಗೆ ವಿರಾಟ್ ಕೊಹ್ಲಿ ಸೇರಿ ಹಲವು ಕ್ರಿಕೆಟಿಗರ ಹಾರೈಕೆ
ಉತ್ತರಾಖಂಡದಲ್ಲಿರುವ ನೀಮ್ ಕರೋಲಿ ಆಶ್ರಮಕ್ಕೆ ದಂಪತಿ ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಅಲ್ಲಿ ಅವರಿಬ್ಬರು ಸುಮಾರು ಒಂದು ಗಂಟೆಯ ಕಾಲ ಧ್ಯಾನ ಮಾಡಿದ್ದಾರೆ. ಅಲ್ಲಿನ ದೇವರ ದರ್ಶನ ಮಾಡಿದ್ದಾರೆ. ದಂಪತಿ ಆಶ್ರಮ ದರ್ಶನ ಮಾಡುತ್ತಿರುವ ಹಾಗೂ ಹೊದಿಕೆ ವಿತರಿಸುತ್ತಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಹಾಗೆಯೇ ವಿರಾಟ್ ಅವರು ಬ್ಯಾಟ್ ಒಂದರ ಮೇಲೆ ಆಟೋಗ್ರಾಫ್ ಹಾಕಿ ಅಭಿಮಾನಿಗೆ ನೀಡುತ್ತಿರುವ ಫೋಟೋ ಕೂಡ ಜಾಲತಾಣದಲ್ಲಿದೆ.
ಈ ರೀತಿ ಅನುಷ್ಕಾ ಹಾಗೂ ವಿರಾಟ್ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ದಂಪತಿ ಮಗಳೊಂದಿಗೆ ಆಶ್ರಮಕ್ಕೆ ಭೇಟಿ ನೀಡಿದ್ದರು. ಅದೇ ವೇಳೆ ಪ್ರಸಿದ್ಧ ಕಂಚಿ ಧಾಮಕ್ಕೂ ಭೇಟಿ ಕೊಟ್ಟಿದ್ದರು. ದಂಪತಿಯು ನೀಮ್ ಕರೋಲಿ ಅವರ ಅನುಯಾಯಿಗಳು ಎನ್ನುವ ವರದಿಯಿದೆ.
ಈ ಪ್ರವಾಸಕ್ಕೂ ಮೊದಲು ಅನುಷ್ಕಾ ಹಾಗೂ ವಿರಾಟ್ ದುಬೈ ಪ್ರವಾಸ ಮಾಡಿದ್ದರು. ಹೊಸ ವರ್ಷದ ದಿನದಂದು ವಿರಾಟ್ ಅವರು ದುಬೈನ ಪ್ರಸಿದ್ಧ ಹೋಟೆಲ್ ಒಂದರಲ್ಲಿ ತಮ್ಮ ಪತ್ನಿಯೊಂದಿಗಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು.