ನವ ದೆಹಲಿ : ವಿರಾಟ್ ಕೊಹ್ಲಿ ಏಷ್ಯಾ ಕಪ್ ಪಂದ್ಯದಲ್ಲಿ ಶತಕ ಬಾರಿಸುವುದರೊಂದಿಗೆ ವಿಮರ್ಶೆಗಳ ವರ್ತುಲದಿಂದ ಪಾರಾಗಿದ್ದಾರೆ. ಕೊಹ್ಲಿಯ ಪ್ರದರ್ಶನವನ್ನು ನೋಡಿದವರೆಲ್ಲರೂ ಇನ್ನೂ ಹಲವು ವರ್ಷಗಳ ಕಾಲ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಅಂತೆಯೇ ಅವರು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರ ಹೊಗಳಿಕೆಗೂ ಪಾತ್ರರಾಗಿದ್ದು, ಹೆಚ್ಚು ಕೌಶಲವುಳ್ಳ ಬ್ಯಾಟರ್ ಎಂದು ಹೇಳಿದ್ದಾರೆ.
ತಮ್ಮ ಹಾಗೂ ವಿರಾಟ್ ಕೊಹ್ಲಿಯ ಆಟದ ವೈಖರಿಯನ್ನು ಹೋಲಿಕೆ ಮಾಡಿ ಮಾತನಾಡಿದ ಸೌರವ್ ಗಂಗೂಲಿ “ಕೌಶಲದ ವಿಚಾರಕ್ಕೆ ಬಂದಾಗ ವಿರಾಟ್ ಕೊಹ್ಲಿ ಹೆಚ್ಚುಗಾರಿಕೆಯನ್ನು ಹೊಂದಿದ್ದಾರೆ. ನಾವಿಬ್ಬರೂ ಭಿನ್ನ ಸಂದರ್ಭಗಳಲ್ಲಿ ಆಡಿದ್ದೇವೆ ಹಾಗೂ ಸಾಕಷ್ಟು ಪಂದ್ಯಗಳಲ್ಲಿ ಪಾಲ್ಗೊಡಿದ್ದೇವೆ. ಆದರೆ, ಪ್ರದರ್ಶನ ವಿಚಾರಕ್ಕೆ ಬಂದಾಗ ವಿರಾಟ್ ಹೆಚ್ಚು ಆಕ್ರಮಣಶೀಲತೆ ಹೊಂದಿದ್ದಾರೆ,” ಎಂದು ಗಂಗೂಲಿ ಅಭಿಪ್ರಾಯಪಟ್ಟರು.
ಸೌರವ್ ಗಂಗೂಲಿ ಅವರು ೧೧3 ಟೆಸ್ಟ್ ಪಂದ್ಯಗಳು ೩೧೧ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. “ಮಾಧ್ಯಮಗಳಲ್ಲಿ ಟೀಕೆಯೆಂಬುದು ಎಲ್ಲ ಕಾಲಕ್ಕೂ ಇರುತ್ತದೆ. ನಾನು ಆಡುತ್ತಿದ್ದ ಕಾಲದಲ್ಲಿ ನನ್ನ ಹೋಟೆಲ್ ರೂಮ್‌ಗೆ ಪತ್ರಿಕೆಗಳನ್ನು ಹಾಕದಿರುವಂತೆ ಕೋರಿಕೊಳ್ಳುತ್ತಿದ್ದೆ. ಈ ಮೂಲಕ ಟೀಕೆಗಳ ಕಿರಿಕಿರಿಯಿಂದ ಬಚಾವಾಗುತ್ತಿದ್ದೆ. ಆದರೆ, ಈಗ ಡಿಜಿಟಲ್ ಸಾಧನಗಳ ಮೂಲಕ ಕ್ಷಣಕ್ಷಣಕ್ಕೆ ಪ್ರತಿಕ್ರಿಯೆಗಳು ದೊರೆಯುತ್ತವೆ. ಹೀಗಾಗಿ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.
“ನಾನು ಎಂದಿಗೂ ಆತಂಕದ ದಿನಗಳನ್ನು ಕಳೆದಿರಲಿಲ್ಲ. ಒಳ್ಳೆಯ ದಿನಗಳು ಹಾಗೂ ಕೆಟ್ಟ ದಿನಗಳನ್ನು ಎದುರಿಸಿದ್ದೇನೆ. ನನಗೆ ಒತ್ತಡಗಳು ಕಡಿಮೆಯಿದ್ದವು. ಆದರೆ ಯುವ ಆಟಗಾರರಿಗೆ ಹೆಚ್ಚು ಒತ್ತಡಗಳು ಇರುತ್ತವೆ. ಹೀಗಾಗಿ ಯುವ ಆಟಗಾರರು ಅವಕಾಶಗಳಿಗಾಗಿ ಕಾದು ಬೆಳೆಯಬೇಕು,” ಎಂದು ಅವರು ಹೇಳಿದರು.
ಇದನ್ನೂ ಓದಿ | Virat kohli | ಶತಕ ಬಾರಿಸಿದರೂ ವಿರಾಟ್ ಕೊಹ್ಲಿಯ ಟೀಕೆ ನಿಲ್ಲಿಸಲಿಲ್ಲ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್!