ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ದಾಖಲೆಗಳ ಸರದಾರ, ಕಿಂಗ್ ಖ್ಯಾತಿಯ(king kohli) ವಿರಾಟ್ ಕೊಹ್ಲಿ(Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿರಿಸಿ ಇಂದಿಗೆ 16 ವರ್ಷ ತುಂಬಿದೆ. ಅವರ ಈ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ.
ಲಂಕಾ ವಿರುದ್ಧ ಪದಾರ್ಪಣೆ
ವಿರಾಟ್ ಕೊಹ್ಲಿ ಅವರು ಆಗಸ್ಟ್ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಆಗ ತಾನೆ ಅಂಡರ್-19 ವಿಶ್ವಕಪ್ ಗೆದ್ದಿದ್ದ ಅವರಿಗೆ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹವಾಗ್ ಅವರ ಅನುಪಸ್ಥಿತಿಯಲ್ಲಿ ಆರಂಭಿಕಾಗಿ ಆಡುವ ಅವಕಾಶ ನೀಡಲಾಗಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 12 ರನ್ ಗಳಿಸಿ ನುವಾನ್ ಕುಲಶೇಖರ ಅವರಿಗೆ ವಿಕೆಟ್ ಒಪ್ಪಿಸಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ 54 ರನ್ ಗಳಿಸಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದ್ದರು. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ವೇಳೆ ಕೊಹ್ಲಿಗೆ 19 ವರ್ಷ. ಕೇವಲ 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು.
ಡಿಸೆಂಬರ್ 24, 2009ರಲ್ಲಿ ಶ್ರೀಲಂಕಾ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 111 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 14 ಫೋರ್ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕವಾಗಿತ್ತು.
ಅಮೋಘ ಸಾಧನೆ
35 ವರ್ಷದ ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ನೂತನ ಸಾಮ್ರಾಟನಾಗಿ ಹೊರಹೊಮ್ಮಿದ್ದರು. ಇದುವರೆಗೆ ಕೊಹ್ಲಿ ಒಟ್ಟು 295 ಏಕದಿನ ಪಂದ್ಯಗಳನ್ನು ಆಡಿದ್ದು 58.18 ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 13906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಮತ್ತು 72 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 5 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ Virat Kohli: ಲಂಡನ್ನ ಸಿಗ್ನಲ್ನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತ ಕೊಹ್ಲಿ; ವಿಡಿಯೊ ವೈರಲ್
ಟೆಸ್ಟ್ನಲ್ಲಿ 113 ಪಂದ್ಯಗಳಲ್ಲಿ 8848 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 30 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 125 ಟಿ20 ಪಂದ್ಯವಾಡಿ 4188 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನಾಡುವ ಮೂಲಕ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಈಗ ಟೆಸ್ಟ್ ಮತ್ತು ಏಕದಿನ ಮಾತ್ರ ಆಡುತ್ತಿದ್ದಾರೆ.