Site icon Vistara News

Virat Kohli: ಕಿಂಗ್ ಕೊಹ್ಲಿಗೆ 500ನೇ ಪಂದ್ಯದ ರಂಗು​

virat kohli

ಪೋರ್ಟ್‌ ಆಫ್ ಸ್ಪೇನ್‌: ವೆಸ್ಟ್​ ಇಂಡೀಸ್​ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಸೋತ ಭಾರತ ಬ್ಯಾಟಿಂಗ್​ ಆಹ್ವಾನ ಪಡೆದಿದೆ. ಈ ಪಂದ್ಯದಲ್ಲಿ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ಆಡಲಿಳಿಯುವ ಮೂಲಕ ತಮ್ಮ 500ನೇ(Virat Kohli 500th match) ಅಂತಾರಾಷ್ಟ್ರೀಯ ಪಂದ್ಯವನ್ನು ಪೂರ್ತಿಗೊಳಿಸಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಆಟಗಾರ ಹಾಗೂ ವಿಶ್ವದ 10ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.

ಪೋರ್ಟ್‌ ಆಫ್ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ನಲ್ಲಿ ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ಪಂದ್ಯಗಳನ್ನಾಡಿದ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು. ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ್ದು ಕೇವಲ ಮೂವರು ಆಟಗಾರರು ಮಾತ್ರ. ಭಾರತ ಪರ ಈ ಸಾಧನೆ ಮಾಡಿದ ಮೊದಲ ಆಟಗಾರನೆಂದರೆ ಸಚಿನ್​ ತೆಂಡೂಲ್ಕರ್​(sachin tendulkar). ಅವರು 664 ಪಂದ್ಯಗಳನ್ನು ಆಡಿದ್ದಾರೆ. ಮಹೇಂದ್ರ ಸಿಂಗ್​ ಧೋನಿ(ms dhoni) ದ್ವಿತೀಯ ಸ್ಥಾನದಲ್ಲಿದ್ದು ಅವರು 538 ಪಂದ್ಯ ಆಡಿದ್ದಾರೆ. ಮೂರನೇ ಸ್ಥಾನದಲ್ಲಿ ಪ್ರಸ್ತುತ ಭಾರತ ತಂಡದ ಕೋಚ್​ ಆಗಿರುವ ರಾಹುಲ್​ ದ್ರಾವಿಡ್​ ಕಾಣಿಸಿಕೊಂಡಿದ್ದಾರೆ. ದ್ರಾವಿಡ್​ 509 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ Virat Kohli : ವಿಂಡೀಸ್ ವಿರುದ್ಧದ 2ನೇ ಟೆಸ್ಟ್​​ನಲ್ಲಿ ಕೊಹ್ಲಿ ದಾಖಲಿಸಬಹುದಾದ 4 ರೆಕಾರ್ಡ್​ಗಳ ವಿವರ ಇಲ್ಲಿದೆ

100ನೇ ಪಂದ್ಯ

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ನೂರನೇ ಟೆಸ್ಟ್​ ಪಂದ್ಯ ಇದಾಗಿದೆ. ವಿಂಡೀಸ್​ನ ಕೆಲ ಮಾಜಿ ದಿಗ್ಗಜ ಆಟಗಾರರು ಈ ಐತಿಹಾಸಿಕ ಟೆಸ್ಟ್​ ಪಂದ್ಯಕ್ಕೆ ಸಾಕ್ಷಿಯಾಗಿ ಎರಡೂ ತಂಡಗಳ ಆಟಗಾರರನ್ನು ವಿಶೇಷವಾಗಿ ಸ್ವಾಗತಿಸಿದರು. ಉಭಯ ತಂಡಗಳ ಮಧ್ಯೆ ಮೊದಲ ಟೆಸ್ಟ್ ಮುಖಾಮುಖಿ ನಡೆದದ್ದು 1948-49ರಲ್ಲಿ. ಐದು ಪಂದ್ಯಗಳ ಸರಣಿ ಇದಾಗಿತ್ತು. ಈ ಸರಣಿಯನ್ನು ವಿಂಡೀಸ್​ 1-0 ಅಂತರದಿಂದ ಗೆದ್ದು ಬೀಗಿತ್ತು. ಈ ಸರಣಿಗೆ ಭಾರತ ಆತಿಥ್ಯ ವಹಿಸಿಕೊಂಡಿತ್ತು. ಭಾರತ ತಂಡ ವಿಂಡೀಸ್​ ವಿರುದ್ಧ ಮೊತ್ತ ಮೊದಲ ಟೆಸ್ಟ್​ ಸರಣಿ ಗೆದ್ದಿದ್ದು 1970ರಲ್ಲಿ, ವಿಂಡೀಸ್​ ನೆಲದಲ್ಲೇ ಭಾರತ ಮೊದಲ ಗೆಲುವು ದಾಖಲಿಸಿತ್ತು. ಇದು ಕೂಡ 5 ಪಂದ್ಯಗಳ ಸರಣಿ ಆಗಿತ್ತು. ಭಾರತ 1-0 ಅಂತರದಿಂದ ಮೇಲುಗೈ ಸಾಧಿಸಿತ್ತು.

ವಿರಾಟ್ ಕೊಹ್ಲಿ ಅನೇಕ ಆಟಗಾರರಿಗೆ ನಿಜವಾದ ಸ್ಫೂರ್ತಿ

ವಿರಾಟ್​ ಕೊಹ್ಲಿ ಅವರು 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಕೋಚ್​ ದ್ರಾವಿಡ್​ ಅವರು ಕೊಹ್ಲಿ ಕ್ರಿಕೆಟ್​ ಜರ್ನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿರಾಟ್ ಕೊಹ್ಲಿ ಅನೇಕ ಆಟಗಾರರಿಗೆ ನಿಜವಾದ ಸ್ಫೂರ್ತಿ’ ಎಂದರು.

“ವಿರಾಟ್ ಅನೇಕ ಆಟಗಾರರಿಗೆ ನಿಜವಾದ ಸ್ಫೂರ್ತಿ. ತಂಡದಲ್ಲಿ ಮತ್ತು ಅನೇಕ ಆಟಗಾರರು ಅವರನ್ನು ಗೌರವದಿಂದ ನೋಡುತ್ತಾರೆ ಮತ್ತು ಅವರಂತೆ ಕ್ರಿಕೆಟ್​ ಆಡಲು ಬಯಸುತ್ತಾರೆ. ನಿಸ್ಸಂಶಯವಾಗಿ, ಅವರ ದಾಖಲೆಗಳೇ ಅವರ ಬಗ್ಗೆ ಮಾತನಾಡುತ್ತವೆ. ತೆರೆಮರೆಯಲ್ಲಿ ಅವರು ಮಾಡುವ ಶ್ರಮ ಮತ್ತು ಕೆಲಸಗಳು ಅದ್ಭುತ. ಇನ್ನೂ ಕೂಡ ಅವರು ಭಾರತ ಪರ ಪಂದ್ಯವನ್ನಾಡಲಿ ಎಂದು ದ್ರಾವಿಡ್​ ಕೊಹ್ಲಿ ಹಾರೈಸಿದರು.

Exit mobile version