ಮುಂಬಯಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ(Virat Kohli) ಖ್ಯಾತಿ ಇದೀಗ ಪ್ರಶ್ನೆ ಪತ್ರಿಕೆಯಲ್ಲೂ ಮೂಡಿಬಂದಿದೆ. 9ನೇ ತರಗತಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ವಿರಾಟ್ ಕೊಹ್ಲಿಯ ಬಗ್ಗೆ 100 ರಿಂದ 150 ಪದಗಳ ಉತ್ತರ ಬರೆಯಿರಿ ಎಂಬ ಪ್ರಶ್ನೆ ಪತ್ರಿಕೆಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2022ರಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧ ಶತಕ ಸಿಡಿಸುವ ಮೂಲಕ ಕೊಹ್ಲಿ ಬರೋಬ್ಬರಿ 3 ವರ್ಷಗಳ ಬಳಿಕ ಶತಕದ ಬರವನ್ನು ಪೂರ್ಣಗೊಳಿಸಿದರು. ಜತೆಗೆ ತಮ್ಮ ಬ್ಯಾಟಿಂಗ್ ಫಾರ್ಮ್ ಕೂಡ ಕಂಡುಕೊಂಡರು. ಇದಾದ ಬಳಿಕ ಹಿಂದಿರುಗಿ ನೋಡಿಯೇ ಇಲ್ಲ, ಸತತ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಇದೀಗ ವಿರಾಟ್ ಅವರು ಏಷ್ಯಾ ಕಪ್ನಲ್ಲಿ ಬಾರಿಸಿದ ಶತಕದ ಬಗ್ಗೆ 9ನೇ ತರಗತಿ ಇಂಗ್ಲಿಷ್ ಪರೀಕ್ಷೆಯಲ್ಲಿ ಕೊಹ್ಲಿ ಫೋಟೊ ಕುರಿತು ಒಂದು ಪ್ರಶ್ನೆಯನ್ನು ಕೇಳಲಾಗಿದೆ. ಹೌದು, ಕೊಹ್ಲಿ ಪೋಟೊವನ್ನು ಬಿತ್ತರಿಸಿ, ಈ ಕೆಳಗಿನ ಚಿತ್ರದ ಬಗ್ಗೆ 100 ರಿಂದ 120 ಪದಗಳಲ್ಲಿ ಉತ್ತರಿಸಿ ಎಂಬ ಪ್ರಶ್ನೆ ಕೇಳಿದ್ದಾರೆ.
ಕೊಹ್ಲಿ ಪೋಟೊ ನೋಡಿದ ತಕ್ಷಣ ವಿದ್ಯಾರ್ಥಿಗಳು ಒಂದು ಕ್ಷಣ ಅಚ್ಚರಿ ಮತ್ತು ಸಂತಸಗೊಂಡಿದ್ದಾರೆ. ಕೆಲ ವಿದ್ಯಾರ್ಥಿಗಳು ಅಧ್ಯಾಪಕರ ಬಳಿ ಈ ಪ್ರಶ್ನೆ ನಿಜವಾಗಿಯೂ ಇದೆಯೇ ಎಂದು ಕೇಳಿದ್ದಾರೆ. ಅಧ್ಯಾಪಕರು ಹೌದು ಎಂದು ಹೇಳಿದ ಬಳಿಕ ಕ್ರಿಕೆಟ್ ಅಭಿರುಚಿ ಮತ್ತು ಕೊಹ್ಲಿಯ ಅಭಿಮಾನಿಗಳಾದ ಕೆಲ ವಿದ್ಯಾರ್ಥಿಗಳು ಸಂತಸದಿಂದಲೇ ಉತ್ತರಿಸಿದ್ದಾರೆ. ಆದರೆ ಕ್ರಿಕೆಟ್ ಬಗ್ಗೆ ತಿಳಿಯದೇ ಇರುವ ಕೆಲ ವಿದ್ಯಾರ್ಥಿಗಳು ಮಾತ್ರ ಈ ಪ್ರಶ್ನೆಯಿಂದ ಗೊಂದಲಕ್ಕೀಡಾದರು. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಅಫಘಾನಿಸ್ತಾನ ವಿರುದ್ಧ ಕೊನೆಯ ಪಂದ್ಯ ಆಡಿತ್ತು. ಈ ಪಂದ್ಯದಲ್ಲಿ ಕೊಹ್ಲಿ 61 ಎಸೆತಗಳಲ್ಲಿ ಬರೋಬ್ಬರಿ 122 ರನ್ ಬಾರಿಸಿದ್ದರು.
ಇದನ್ನೂ ಓದಿ IPL 2023 : ರಿಷಭ್ ಪಂತ್ ಅಲಭ್ಯತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕಾಡುತ್ತಿದೆ ಎಂದ ನಿರ್ದೇಶಕ ಸೌರವ್ ಗಂಗೂಲಿ
ಸದ್ಯ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿದ್ದು 16ನೇ ಆವೃತ್ತಿಯ ಐಪಿಎಲ್ ಟೂರ್ನಿಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ನಗರದ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಮಧ್ಯೆ ರಜತ್ ಪಾಟೀದಾರ್ ಪಾದದ ನೋವಿನಿಂದ ಬಳಲುತ್ತಿದ್ದು ಅವರು ಆಡುವುದು ಅನುಮಾನ ಎನ್ನಲಾಗಿದೆ. ಜತೆಗೆ ತಂಡದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್ವೆಲ್ ಕೂಡ ತಾನು ಸಂಪೂರ್ಣ ಫಿಟ್ ಆಗಿಲ್ಲ ಎಂದು ಹೇಳಿರುವುದು ತಂಡದಕ್ಕೆ ಚಿಂತೆಗೀಡು ಮಾಡಿದೆ.