ಮುಂಬಯಿ: ಐಪಿಎಲ್ ಪ್ಲೇಆಫ್ ಸ್ಥಾನಗಳನ್ನು ಪಡೆಯುವಲ್ಲಿ ಸೋತ ತಂಡಗಳಲ್ಲಿ ಇದ್ದ ಭಾರತೀಯ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಪಾಲ್ಗೊಳ್ಳಲು ಮಂಗಳವಾರ ಬೆಳಗ್ಗೆ ಇಂಗ್ಲೆಂಡ್ಗೆ ಪ್ರವಾಸ ಬೆಳೆಸಿದೆ. ಈ ಆಟಗಾರರು ಇಂಗ್ಲೆಂಡ್ನ ಹವಾಗುಣ ಹಾಗೂ ಅಲ್ಲಿನ ಪಿಚ್ಗೆ ಹೊಂದಿಕೊಳ್ಳುವುದಕ್ಕೆ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಪಟ್ಟಿಯಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ವೇಗಿ ಮೊಹಮ್ಮದ್ ಸಿರಾಜ್ ಮತ್ತಿತರರು ಇದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನ ಲೀಗ್ನ ಹಂತದಲ್ಲೇ ನಿರ್ಗಮಿಸಿದೆ. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಐಪಿಎಲ್ ಕರ್ತವ್ಯಗಳಿಂದ ಮುಕ್ತರಾಗಿದ್ದಾರೆ. ಅದೇ ರೀತಿ ಡೆಲ್ಲಿ ತಂಡ ಅಕ್ಷರ್ ಪಟೇಲ್, ಕೆಕೆಆರ್ನ ಉಮೇಶ್ ಯಾದವ್ ಮತ್ತು ಶಾರ್ದುಲ್ ಠಾಕೂರ್ ಮತ್ತು ರಾಜಸ್ಥಾನ್ ರಾಯಲ್ಸ್ನ ಆರ್ ಅಶ್ವಿನ್ ಐಪಿಎಲ್ನಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಈ ಬಳಗ ಇಂಗ್ಲೆಂಡ್ಗೆ ಮೊದಲು ತಲುಪಲಿದೆ. ಜೂನ್ 7ರಿಂದ ಓವಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯಕ್ಕಾಗಿ ರಾಹುಲ್-ದ್ರಾವಿಡ್ ಕೋಚಿಂಗ್ ಸಿಬ್ಬಂದಿಯೊಂದಿಗೆ ಈ ಆಟಗಾರರು ಬೇಗನೆ ಅಭ್ಯಾಸವನ್ನು ಪ್ರಾರಂಭಿಸಲಿದ್ದಾರೆ.
ಉನಾದ್ಕಟ್ ತಡವಾಗಿ ತಂಡ ಸೇರ್ಪಡೆ
ಏಪ್ರಿಲ್ 30 ರಂದು ಐಪಿಎಲ್ನ ಅಭ್ಯಾಸದ ವೇಳೆ ಎಡಗೈ ಭುಜದ ಗಾಯಕ್ಕೆ ಒಳಗಾದ ಎಡಗೈ ವೇಗಿ ಜಯದೇವ್ ಉನಾದ್ಕಟ್ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಆದರೆ ಪುನಶ್ಚೇತನವನ್ನು ಪೂರ್ಣಗೊಳಿಸಿ, ಸಂಪೂರ್ಣವಾಗಿ ಫಿಟ್ ಎಂದು ಘೋಷಿಸಿದ ನಂತರ ಅವರು ಇಂಗ್ಲೆಂಡ್ಗೆ ಪ್ರಯಾಣಿಸಲಿದ್ದಾರೆ. ಜಯದೇವ್ ನೆಟ್ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಅವರು ಪಂದ್ಯಕ್ಕೆ ಮೊದಲು ಸಿದ್ಧರಾಗುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಮೇಶ್ ಯಾದವ್ ಕೂಡ ಐಪಿಎಲ್ ಸಮಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದೀಗ ಅವರು ಗಾಯದಿಂದ ಮುಕ್ತರಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಪರ ಏಪ್ರಿಲ್ 26ರಂದು ಆಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಬಲಗೈ ವೇಗಿ ಮುಖೇಶ್ ಕುಮಾರ್ ಬ್ಯಾಕಪ್ ಬೌಲರ್ ಆಗಿ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾರೆ. ಬೆಂಗಾಲ್ ಪರ ರಣಜಿ ಟ್ರೋಫಿ ಆಡುತ್ತಿರುವ ಮುಖೇಶ್ ರೆಸ್ಟ್ ಆಫ್ ಇಂಡಿಯಾ ಪರ ಆಡಿದ್ದಾರೆ.
ಇದನ್ನೂ ಓದಿ : WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಉನಾದ್ಕತ್ ಫಿಟ್; ಸೋಮವಾರದಿಂದ ಅಭ್ಯಾಸ ಆರಂಭ
ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಅಜಿಂಕ್ಯ ರಹಾನೆ, ಕೆಎಸ್ ಭರತ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಇಶಾನ್ ಕಿಶನ್, ಮೀಸಲು ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಋತುರಾಜ್ ಗಾಯಕ್ವಾಡ್ ತಮ್ಮ ತಂಡದ ಐಪಿಎಲ್ ಅಭಿಯಾನ ಮುಗಿದ ನಂತರ ಇಂಗ್ಲೆಂಡ್ಗೆ ಪ್ರಯಾಣ ಮುಂದುವರಿಸಲಿದ್ದಾರೆ. ಚೇತೇಶ್ವರ್ ಪೂಜಾರ ಅವರು ಸಸೆಕ್ಸ್ ತಂಡದ ಪರ ಕೌಂಟಿ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ. ಅವರು ಅಲ್ಲಿಂದಲೇ ತಂಡ ಸೇರಿಸಿಕೊಳ್ಳಲಿದ್ದಾರೆ.
ಡ್ಯೂಕ್ ಚೆಂಡಿನ ಬಳಕೆ
ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯವನ್ನು ಇಂಗ್ಲೆಂಡ್ ಪರಿಸ್ಥಿತಿಗೆ ಪೂರಕವಾಗಿ ಡ್ಯೂಕ್ಸ್ ಚೆಂಡಿನಲ್ಲಿ ಆಡಲಾಗುತ್ತದೆ. ಅಂತೆಯೇ ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ವೇಗದ ಬೌಲರ್ಗಳಾಗಿದ್ದಾರೆ. ಇವರಿಬ್ಬರೂ ಅಪಾಯಕಾರಿ ಬೌಲರ್ಗಳು. ಇವರಿಬ್ಬರೂ ಆ್ಯಶಸ್ಗಾಗಿ ಐಪಿಎಲ್ನಿಂದ ಹೊರಕ್ಕೆ ಉಳಿದಿದ್ದರು. ಭಾರತೀಯ ಬೌಲರ್ಗಳೆಲ್ಲರೂ ಟಿ20 ಮಾದರಿಯಲ್ಲಿ ಬ್ಯುಸಿಯಾಗಿದ್ದ ಕಾರಣ ತಕ್ಷಣದಲ್ಲೇ ಟೆಸ್ಟ್ ಕ್ರಿಕೆಟ್ಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಮಾಹಿತಿ ಪ್ರಕಾರ ಕೆಲವು ಆಟಗಾರರು ಐಪಿಎಲ್ ಅಭ್ಯಾಸದ ವೇಳೆಯೂ ಕೆಂಪು ಚೆಂಡಿನಲ್ಲಿ ಆಡಿದ್ದರು.