ಮುಂಬಯಿ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆಂಬ ಸುದ್ದಿ ಶನಿವಾರ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಬಿಸಿಸಿಐ ಮುಂದಿನ ಐಸಿಸಿ ಟ್ರೋಫಿಗಳಲ್ಲಿ ಯಶಸ್ಸು ಸಾಧಿಸುವ ಉದ್ದೇಶದಿಂದ ಯುವಕರನ್ನು ಒಳಗೊಂಡಿರುವ ಹೊಸ ತಂಡ ಕಟ್ಟುತ್ತದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ವಿರಾಟ್ ವಿದಾಯ ಹೇಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿಗೆ ಕಾರಣವಾಗಿದ್ದು ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್.
ವಿರಾಟ್ ಕೊಹ್ಲಿ ಕಳೆದ ಟಿ೨೦ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಬಾರಿಸಿದ್ದ ಅಜೇಯ ೮೨ ರನ್‌ಗಳನ್ನು ಬಾರಿಸಿ ಭಾರತ ತಂಡದ ರೋಚಕ ಜಯಕ್ಕೆ ಕಾರಣವಾಗಿದ್ದರು. ಈ ಇನಿಂಗ್ಸ್ ವೇಳೆಯ ಚಿತ್ರವನ್ನು ಪೋಸ್ಟ್ ಶನಿವಾರ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿ “೨೦೨೨ರ ಅಕ್ಟೋಬರ್ ೨೩ ನನ್ನ ಹೃದಯದಲ್ಲಿ ಸದಾ ನೆಲೆಯೂರಿರುವ ದಿನವಾಗಿದೆ. ನನ್ನಲ್ಲಿ ಅಷ್ಟೊಂದು ಶಕ್ತಿ ಇದೆ ಎಂಬುದನ್ನು ನಾನು ಅದುವರೆಗೆ ನಾನು ಅಂದುಕೊಂಡಿರಲಿಲ್ಲ. ಅದೊಂದು ಶುಭಾಶಿರ್ವಾದದ ಸಂಜೆ,” ಎಂಬುದಾಗಿ ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಪೋಸ್ಟ್ ನೋಡುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿಕೊಂಡರು. ಕೊಹ್ಲಿ ನಿವೃತ್ತಿಯ ನಿರ್ಧಾರ ತಳೆದಿದ್ದಾರೆ ಎಂಬುದಾಗಿ ಅವರು ಅಂದುಕೊಂಡು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. ಇದಕ್ಕೂ ಕಾರಣವಿದೆ, ಭಾರತ ತಂಡದ ಮಾಜಿ ನಾಯಕ ಹಾಗೂ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ೨೦೨೦ರ ಆಗಸ್ಟ್ ೧೫ರಂದು ಇದೇ ರೀತಿಯಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ವಿದಾಯ ಹೇಳಿದ್ದರು. ಹೀಗಾಗಿ ವಿರಾಟ್ ಕೊಹ್ಲಿಯೂ ನಿವೃತ್ತಿ ಹೇಳಿರಬಹುದು ಎಂದು ಎಲ್ಲರೂ ಅಂದುಕೊಂಡರು.
ವಿರಾಟ್ ಕೊಹ್ಲಿ ೨೦೨೨ನೇ ಆವೃತ್ತಿಯ ಟಿ೨೦ ವಿಶ್ವ ಕಪ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್. ಆದಾಗ್ಯೂ ಟೀಮ್ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋಲುವ ಮೂಲಕ ನಿರಾಸೆ ಎದುರಿಸಿತ್ತು. ಇದರ ಬೆನ್ನಲ್ಲೆ ೨೦೨೪ರ ವಿಶ್ವ ಕಪ್ ವೇಳೆಗೆ ಯುವಕರನ್ನು ಒಳಗೊಂಡ ಹೊಸ ತಂಡ ಕಟ್ಟಲು ಬಿಸಿಸಿಐ ಸಿದ್ಧವಾಗಿದೆ ಎಂಬುದಾಗಿ ವರದಿಯಾಯಿತು. ಹೀಗಾಗಿ ಹಿರಿಯ ಆಟಗಾರರು ನಿವೃತ್ತಿ ನೀಡಬೇಕಾಗಬಹುದು. ಇದೇ ಹಿನ್ನೆಲೆಯಲ್ಲಿ ಕೊಹ್ಲಿ ವಿದಾಯ ಹೇಳಿದ್ದಾರೆ ಎಂದು ಎಲ್ಲರೂ ನಂಬಿದರು. ಸುದ್ದಿಯಾದ ಬಳಿಕವೂ ಕೊಹ್ಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ಇದನ್ನೂ ಓದಿ ವ| Virat Kohli | ವಿಶ್ರಾಂತಿಯ ಅವಧಿಯನ್ನು ಚಾರಿಟಿ ಕೆಲಸಕ್ಕೆ ಮೀಸಲಿಟ್ಟ ವಿರಾಟ್ ಕೊಹ್ಲಿ