ಮೆಲ್ಬೋರ್ನ್: ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23ಕ್ಕೆ ತಮ್ಮ ಮೊದಲ ಪಂದ್ಯವನ್ನಾಡುವ ಮೂಲಕ ಟಿ20 ವಿಶ್ವ ಕಪ್ ಅಭಿಯಾನ ಆರಂಭಿಸಲಿವೆ. ಆದರೆ ಈ ಹೈವೋಲ್ಟೆಜ್ ಪಂದ್ಯಕ್ಕೂ ಮುನ್ನವೇ ಹಲವಾರು ನಿರೀಕ್ಷೆ ಮತ್ತು ಚರ್ಚೆಗಳು ಆರಂಭವಾಗಿವೆ. ಈ ನಡುವೆ ವಿರಾಟ್ ಕೊಹ್ಲಿ (Virat Kohli) ಮತ್ತು ಪಾಕ್ ತಂಡದ ನಾಯಕ ಬಾಬರ್ ಅಜಂ ಅಕ್ಕಪಕ್ಕದ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ಮಂಗಳವಾರ ನೆಟ್ಸ್‌ನಲ್ಲಿ ವಿರಾಟ್ ಮತ್ತು ಬಾಬರ್ ಅಭ್ಯಾಸ ನಡೆಸಿದ್ದಾರೆ. ಈ ವೇಳೆ, ಶಾರ್ಟ್ ಬಾಲ್ ಎಸೆತಕ್ಕೆ ವಿರಾಟ್ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಿದ್ದರು. ಇದನ್ನು ಗಮನಿಸಿದ ಬಾಬರ್ ಬಳಿಕ ಕೊಹ್ಲಿಯ ಬ್ಯಾಟಿಂಗ್ ಅಭ್ಯಾಸವನ್ನು ಸಂಪೂರ್ಣವಾಗಿ ನೋಡಿ, ತಮ್ಮ ಬ್ಯಾಟಿಂಗ್ ಶಾಟ್‌ಗಳನ್ನು ಬದಲಾಯಿಸಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಕ್ ನಾಯಕ ‘ಕಿಂಗ್’ ಕೊಹ್ಲಿಯ ಬ್ಯಾಟಿಂಗ್ ಅಭ್ಯಾಸವನ್ನು ಕದ್ದು ನೋಡುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನೆಟ್ಟಿಗರು ಏನೇ ಅಂದರೂ ಕೊಹ್ಲಿ ಮತ್ತು ಬಾಬರ್ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಇದೆಲ್ಲದರ ಹೊರತಾಗಿ ಕೊಹ್ಲಿ ಮತ್ತು ಬಾಬರ್ ಉತ್ತಮ ಸ್ನೇಹಿತರು. ಈ ಹಿಂದೆಯೂ ವಿರಾಟ್ ಹಲವಾರು ಬಾರಿ ಬಾಬರ್ಗೆ ಬ್ಯಾಟಿಂಗ್ ಸಲಹೆ ನೀಡಿದ್ದರು. ಇದಕ್ಕೆ ಉತ್ತಮ ನಿದರ್ಶನವೆಂದರೆ 2019ರ ಏಕ ದಿನ ವಿಶ್ವ ಕಪ್ ಮುನ್ನ ಬಾಬರ್ ಅವರು ವಿರಾಟ್ ಕೊಹ್ಲಿ ಬಳಿ ಬಂದು, ಕೆಲ ಬ್ಯಾಟಿಂಗ್ ಸಲಹೆಯನ್ನು ಪಡೆದುಕೊಂಡಿದ್ದರು.
ಇದನ್ನೂ ಓದಿ | Roger Binny | ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆ