ಡೊಮಿನಿಕಾ: ವಿರಾಟ್ ಕೊಹ್ಲಿ ಮೈದಾನದಲ್ಲಿ ಎಷ್ಟು ಬದ್ಧತೆ, ಗಮನ ಕೇಂದ್ರೀಕರಿಸಿ ಅಬ್ಬರಿಸುತ್ತಾರೋ, ಅಷ್ಟೇ ನಿಷ್ಠೆಯಿಂದ ಫಿಟ್‌ನೆಸ್‌ಗೂ ಆದ್ಯತೆ ಕೊಡುತ್ತಾರೆ. ಅದರಲ್ಲೂ, ಯಾವುದಾದರೂ ಸರಣಿ, ವಿಶ್ವಕಪ್ ಆರಂಭವಾಗುವ ಕೆಲ ದಿನಗಳ ಮೊದಲಂತೂ ಅವರು ಹೆಚ್ಚು ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಾರೆ. ಹಾಗೆಯೇ, ಜಿಮ್‌ನಲ್ಲಿ ತಾಸುಗಟ್ಟಲೆ ವರ್ಕೌಟ್ ಮಾಡುವ ಮೂಲಕ ಹೆಚ್ಚು ಫಿಟ್ ಆಗಿರಲು, ಮೈದಾನದಲ್ಲಿ ಮಿಂಚಲು ಸಿದ್ಧರಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಜುಲೈ 12ರಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗುವ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ (Virat Kohli) ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದಾರೆ. ಅವರ ಕಸರತ್ತಿನ ಫೋಟೊಗಳು ವೈರಲ್ ಆಗಿವೆ.
ಡೊಮಿನಿಕಾದ ಜಿಮ್‌ನಲ್ಲಿ ವಿರಾಟ್ ಕೊಹ್ಲಿ ಭಾರಿ ವರ್ಕೌಟ್ ಮಾಡಿದ್ದಾರೆ. ಅವರೇ ವರ್ಕೌಟ್ ಫೋಟೊಗಳನ್ನು ಶೇರ್ ಮಾಡಿದ್ದು, ಭಾರಿ ವೈರಲ್ ಆಗಿವೆ. ಹಾಗೆಯೇ, “ಪ್ರತಿ ದಿನವೂ ಲೆಗ್ ಡೇ ಆಗಬೇಕು. ಎಂಟು ವರ್ಷದಿಂದ ಇದನ್ನೇ ಅನುಸರಿಸುತ್ತಿದ್ದೇನೆ. ಇದನ್ನೇ ಮುಂದುವರಿಸುತ್ತೇನೆ” ಎಂದು ಒಕ್ಕಣೆ ಬರೆದಿದ್ದಾರೆ. ಅಂದರೆ, ಎಂಟು ವರ್ಷದಿಂದ ನಿತ್ಯ ಕಾಲುಗಳಿಗೆ ಕೆಲಸ ಕೊಡುತ್ತಿರುವ, ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಕುರಿತು ಕಿಂಗ್ ಕೊಹ್ಲಿ ಮಾಹಿತಿ ನೀಡಿದ್ದಾರೆ.
ಮೆಚ್ಚಿದ ನೊವಾಕ್ ಜೊಕೊವಿಕ್
ವಿರಾಟ್ ಕೊಹ್ಲಿ ಜಿಮ್ ವರ್ಕೌಟ್ ಫೋಟೊಗಳಿಗೆ ಅವರ ಫ್ಯಾನ್ಸ್ ಮಾತ್ರವಲ್ಲ ಜಾಗತಿಕ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಸೇರಿ ಹಲವು ಸೆಲೆಬ್ರಿಟಿಗಳು ಫಿದಾ ಆಗಿದ್ದಾರೆ. ನೊವಾಕ್ ಜೊಕೊವಿಕ್, ವಿರಾಟ್ ಕೊಹ್ಲಿ ಪತ್ನಿ ಅನುಶ್ಕಾ ಶರ್ಮಾ, ಕ್ರಿಕೆಟಿಗ ಇಶಾನ್ ಕಿಶನ್, ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಸೇರಿ ನೂರಾರು ಸೆಲೆಬ್ರಿಟಿಗಳು ಕೊಹ್ಲಿ ಫೋಟೊಗಳನ್ನು ಲೈಕ್ ಮಾಡಿದ್ದಾರೆ. ಕಿಂಗ್ ಕೊಹ್ಲಿ ಅಭಿಮಾನಿಗಳಂತೂ ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ.
ಇದನ್ನೂ ಓದಿ: ಅನುಷ್ಕಾ ಮೊಬೈಲ್ನಲ್ಲಿ ಸೇವ್ ಆದ ಕೊಹ್ಲಿಯ ಹೆಸರೇನು? ಪರಮೇಶ್ವರನಿಗಿದೆ ನಂಟು
ವೆಸ್ಟ್ ಇಂಡೀಸ್‌ನ ಡೊಮಿನಿಕಾದಲ್ಲಿ ಜುಲೈ 12ರಿಂದ 16ರವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ ಭಾರತ ತಂಡವನ್ನು ಘೋಷಿಸಲಾಗಿದ್ದು, ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆಯೇ, ಭಾರತ ತಂಡದ ಜೆರ್ಸಿ ಪ್ರಾಯೋಜಕ ಕಂಪನಿ ಇತ್ತೀಚೆಗೆ ಬದಲಾಗಿದೆ. ಹಿಂದೆ ನೈಕಿ ಕಂಪನಿಯು ಭಾರತಕ್ಕೆ ಜೆರ್ಸಿಯನ್ನು ನೀಡುತ್ತಿತ್ತು. ಈಗ ಅಡಿಡಾಸ್ ಸಂಸ್ಥೇ ನೀಡುತ್ತಿದೆ. ನೈಕಿ ಸಂಸ್ಥೆ ನೀಲಿ ಬಣ್ಣದ ಜೆರ್ಸಿಯನ್ನೇ ಭಾರತ ತಂಡದ ಆಟಗಾರರಿಗೆ ನೀಡುತ್ತಿತ್ತು. ಆದರೆ, ಅಡಿಡಾಸ್ ಕಪ್ಪು ಬಣ್ಣದ ಜೆರ್ಸಿ ಕೊಟ್ಟಿದ್ದಾರೆ. ಅದನ್ನು ಹಾಕಿಕೊಂಡು ಆಟಗಾರರು ಮಿರಮಿರ ಮಿಂಚಿದ್ದಾರೆ.