ಅಹಮದಾಬಾದ್: ಆರ್ಸಿಬಿಯ(RCB) ಹೊಸ ಅಧ್ಯಾಯ ಎಲಿಮಿನೇಟರ್ ಪಂದ್ಯಕ್ಕೆ ಮುಕ್ತಾಯ ಕಂಡಿದೆ. ಬುಧವಾರ ನಡೆದ ರಾಜಸ್ಥಾನ್(Rajasthan Royals) ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 4 ವಿಕೆಟ್ ಸೋಲು ಕಾಣವ ಮೂಲಕ ಟೂರ್ನಿಯಿಂದ ಹೊರಬಿದ್ದಿತು. ಜತೆಗೆ ಅಭಿಮಾನಿಗಳ ಈ ಸಲ ಕಪ್ ನಮ್ದೇ ಎನ್ನುವ ಕನಸು ಮತ್ತೆ ಕನಸಾಗಿಯೇ ಉಳಿಯಿತು. ಪಂದ್ಯದ ಸೋಲಿನ ಬಳಿಕ ವಿರಾಟ್ ಕೊಹ್ಲಿ(Virat Kohli) ಭಾವುಕರಾಗಿ ಕಂಡು ಬಂದರು. ಈ ಫೋಟೊ ವೈರಲ್ ಆಗಿದೆ.
ಕಳೆದ ವರ್ಷ ಭಾರತದಲ್ಲೇ, ಅದು ಕೂಡ ಅಹಮದಾಬಾದ್ನಲ್ಲೇ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವ ಮೂಲಕ ಟ್ರೋಫಿ ಗೆಲ್ಲಲು ವಿಫಲವಾಗಿತ್ತು. ಪಂದ್ಯ ಸೋಲುನ ಬಳಿಕ ವಿರಾಟ್ ಕೊಹ್ಲಿ ಭಾವುಕರಾಗಿ ತಮ್ಮ ಕ್ಯಾಪ್ನಿಂದ ವಿಕೆಟ್ ಬೇಲ್ಸ್ ಹಾರಿಸಿ ಬೇಸರದಿಂದ ಡಗೌಟ್ ಕಡೆಗೆ ಹೆಜ್ಜೆ ಹಾಕಿದ್ದರು. ಐಪಿಎಲ್ನಲ್ಲಿಯೂ ಕೊಹ್ಲಿ ಇದೇ ಮೈದಾನದಲ್ಲಿ ಮತ್ತೆ ಸೋಲು ಕಂಡಿದ್ದಾರೆ. ರಾಜಸ್ಥಾನ್ ವಿರುದ್ಧ ಸೋತ ಹತಾಶೆಯಲ್ಲಿ ಕೊಹ್ಲಿ ಮತ್ತೆ ವಿಕೆಟ್ ಬೇಲ್ಸ್ ಹಾರಿಸಿ ಬೇಸರದಿಂದ ಹೆಜ್ಜೆ ಹಾಕಿದರು. ಈ ಫೋಟೊ ಕಂಡು ಕೊಹ್ಲಿಯ ಅಭಿಮಾನಿಗಳು ಭಾವುಕರಾಗಿದ್ದಾರೆ.
ವಿಶ್ವಕಪ್ ಸರಣಿಯಲ್ಲೂ ಕೊಹ್ಲಿ ಟೂರ್ನಿಯ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಬಾರಿ ಐಪಿಎಲ್ನಲ್ಲಿಯೂ ಕೊಹ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನಾಗಿದ್ದಾರೆ. ಆದರೆ ಕಪ್ ಗೆಲ್ಲಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ. ಕೊಹ್ಲಿ ನಿರ್ಣಾಯ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಾಣುವುದು ನಿಶ್ಚಿತ. ಇದಕ್ಕೆ ಹಲವು ನಿದರ್ಶನ ಕೂಡ ಇದೆ. ಲೀಗ್ ಹಂತದಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿದ್ದರೂ ಕೂಡ ನಿರ್ಣಾಯ ಪಂದ್ಯದಲ್ಲಿ ಅವರು ಯಾವತ್ತೂ ಕೂಡ ವಿಫಲರಾಗುತ್ತಾರೆ. ಈ ಬಾರಿ ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ನಡೆಸಿದ್ದ ಕೊಹ್ಲಿ, ಎಲಿಮಿನೇಟರ್ ಪಂದ್ಯದಲ್ಲಿ 33 ರನ್ಗೆ ವಿಕೆಟ್ ಕಳೆದುಕೊಂಡರು.
ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ
ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 8 ವಿಕೆಟಿಗೆ 172 ರನ್ ಗಳಿಸಿತು. ರಾಜಸ್ಥಾನ್ 19 ಓವರ್‌ಗಳಲ್ಲಿ 6 ವಿಕೆಟಿಗೆ 174 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಚೇಸಿಂಗ್ ವೇಳೆ ರಾಜಸ್ಥಾನ್ ಬಿರುಸಿನ ಆಡವಾಡಿತು. ಜೈಸ್ವಾಲ್ (45)-ಕ್ಯಾಡ್‌ಮೋರ್ (20) ಮೊದಲ ವಿಕೆಟ್ಗೆ 46 ರನ್ ಜತೆಯಾಟ ನಿಭಾಯಿಸಿದರು. ಆ ಬಳಿಕ ಜೈಸ್ವಾಲ್-ಸ್ಯಾಮ್ಸನ್ ಜತೆಗೂಡಿ 35 ರನ್ ಕಲೆಹಾಕಿದರು. 112ಕ್ಕೆ 4 ವಿಕೆಟ್ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್-ಹೆಟ್‌ಮೈರ್ ಸಿಡಿದು ನಿಂತು 45 ರನ್ ಜತೆಯಾಟ ನಿಭಾಯಿಸಿ ಆರ್‌ಸಿಬಿಗೆ ಸೋಲುಣಿಸಿದರು. ಮೂರು ಓವರ್ ತನಕ ಉತ್ತಮ ಲಯದಲ್ಲಿದ್ದ ಕ್ಯಾಮರೂನ್ ಗ್ರೀನ್ ನಾಲ್ಕನೇ ಓವರ್ನಲ್ಲಿ ದುಬಾರಿಯಾದರು. ಹೆಟ್‌ಮೈರ್ ಈ ಓವರ್ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಬಿಸಿ ಮುಟ್ಟಿಸಿದರು.