ಅಹಮದಾಬಾದ್: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. 300 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಫೀಲ್ಡಿಂಗ್ ದಾಖಲೆ, ತವರಿನಲ್ಲಿ ನಾಲ್ಕು ಸಾವಿರ ಟೆಸ್ಟ್ ರನ್ಗಳನ್ನು ಬಾರಿಸಿದ ದಾಖಲೆಗಳನ್ನು ಅವರು ಮಾಡಿದ್ದಾರೆ. ಇದೇ ವೇಳೆ ಅವರು ವೆಸ್ಟ್ ಇಂಡೀಸ್ನ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಅವರ ಸಾಧನೆಯೊಂದನ್ನು ಹಿಮ್ಮೆಟ್ಟಿಸಿದ್ದಾರೆ. ಈ ಮೂಲಕ ಅವರು ಆಧನಿಕ ಕ್ರಿಕೆಟ್ನ ಶ್ರೇಷ್ಠ ಬ್ಯಾಟರ್ ತಾವೆಂಬುದನ್ನು ಸಾಬೀತುಮಾಡಿದ್ದಾರೆ.
ವಿರಾಟ್ ಕೊಹ್ಲಿ ಈಗ ಆಸ್ಟ್ರೇಲಿಯಾ ತಂಡದ ವಿರುದ್ಧ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ಗಳನ್ನು ಬಾರಿಸಿದ ಆಟಗಾರರ ಪೈಕಿ ಎರಡನೆಯವರು ಎನಿಸಿಕೊಂಡಿದ್ದಾರೆ. ಈ ವೇಳೆ ಅವರು ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 89 ಪಂದ್ಯಗಳ 104 ಇನಿಂಗ್ಸ್ಗಳಲ್ಲಿ 4729 ರನ್ ಬಾರಿಸಿದ್ದಾರೆ. 34 ವರ್ಷದ ಬ್ಯಾಟರ್ 50.84 ಸರಾಸರಿಯಲ್ಲಿ ಬ್ಯಾಟ್ ಮಾಡಿದ್ದಾರೆ. ಅದರಲ್ಲಿ 15 ಶತಕಗಳು ಹಾಗೂ 24 ಅರ್ಧ ಶತಕಗಳು ಸೇರಿಕೊಂಡಿವೆ. ಲಾರಾ 82 ಪಂದ್ಯಗಳ 108 ಇನಿಂಗ್ಸ್ಗಳಲ್ಲಿ 4714 ರನ್ ಬಾರಿಸಿದ್ದಾರೆ. ಅದರಲ್ಲಿ 12 ಶತಕ ಹಾಗೂ 26 ಅರ್ಧ ಶತಕಗಳು ಸೇರಿಕೊಂಡಿವೆ. ಆಸ್ಟ್ರೇಲಿಯಾ ವಿರುದ್ಧ ಎಮ್ಸಿಜಿಯಲ್ಲಿ ಬಾರಿಸಿದ 277 ರನ್ ಅವರ ಪಾಲಿನ ಗರಿಷ್ಠ ರನ್ ಆಗಿದೆ.
ಇದನ್ನೂ ಓದಿ : IND VS AUS: ಕ್ಯಾಚ್ ಮೂಲಕ ದಾಖಲೆ ಬರೆದ ವಿರಾಟ್ ಕೊಹ್ಲಿ
ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವವರು ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಸಚಿನ್ 110 ಪಂದ್ಯಗಳ 144 ಇನಿಂಗ್ಸ್ಗಳಲ್ಲಿ 6707 ರನ್ ಬಾರಿಸಿದ್ದಾರೆ. ಅದರಲ್ಲಿ 20 ಶತಕಗಳು ಹಾಗೂ 31 ಅರ್ಧ ಶತಕಗಳು ಸೇರಿಕೊಂಡಿವೆ. ಅಜೇಯ 241 ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ ಗರಿಷ್ಠ ರನ್ ಎನಿಸಿಕೊಂಡಿದೆ.