ನವದೆಹಲಿ: ವಿರಾಟ್ ಕೊಹ್ಲಿ(Virat Kohli) ಅವರು ಟಿ20 ವಿಶ್ವಕಪ್ ಗೆಲುವಿನ ಬಳಿಕ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಈ ವೇಳೆ ಕೊಹ್ಲಿ ಶೀಘದ್ರದಲ್ಲೇ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಇದೀಗ ವಿರಾಟ್ ಅವರ ಬಾಲ್ಯದ ಕೋಚ್(Virat Kohli Coach) ರಾಜ್ಕುಮಾರ್ ಶರ್ಮಾ(Rajkumar Sharma), ಕೊಹ್ಲಿ ನಿವೃತ್ತಿ ಸದ್ಯಕ್ಕಿಲ್ಲ ಎಂದು ಖಚಿತಪಡಿಸಿದ್ದಾರೆ. ಈ ವಿಚಾರ ಕೇಳಿ ಕೊಹ್ಲಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.
“ನಾನು ವಿರಾಟ್ ಜತೆ ಮಾತನಾಡಿದ್ದೇನೆ. ಅವರು ಮುಂದಿನ ಹಲವು ವರ್ಷಗಳವರೆಗೆ ಭಾರತದ ಪರ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಇನ್ನೂ ಕೆಲ ವರ್ಷಗಳ ಕಾಲ ಏಕದಿನ ಮತ್ತು ಟೆಸ್ಟ್ ಆಡುವುದನ್ನು ಮುಂದುವರಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ರಾಜ್ಕುಮಾರ್ ಶರ್ಮಾ ತಿಳಿಸಿದ್ದಾರೆ.
ಬಾರ್ಬಡೋಸ್ನಲ್ಲಿ ಟಿ20 ವಿಶ್ವಕಪ್ ಗೆದ್ದು ಟೀಮ್ ಇಂಡಿಯಾ ಆಟಗಾರರು ನವದೆಹಲಿಗೆ ಆಮಮಿಸಿದ್ದ ವೇಳೆ ರಾಜ್ಕುಮಾರ್ ಶರ್ಮಾ ಅವರು ಕೊಹ್ಲಿಯನ್ನು ಭೇಟಿ ಮಾಡಿದ್ದರು. ಈ ವೇಳೆ ತನ್ನ ಶಿಷ್ಯನ ಬಳಿ ರಾಜ್ಕುಮಾರ್ ಕೆಲ ಕಾಲ ಚರ್ಚೆ ಮಾತುಕತೆ ನಡೆದಿದ್ದರು. ಮುಂದಿನ ಕ್ರಿಕೆಟ್ ನಿರ್ಧಾರದ ಬಗ್ಗೆಯೂ ರಾಜ್ಕುಮಾರ್ ಕೊಹ್ಲಿ ಜತೆ ಚರ್ಚಿಸಿದ್ದಂತಿದೆ. ಇದೇ ಕಾರಣಕ್ಕೆ ಅವರು ಕೊಹ್ಲಿ ಇನ್ನೂ ಕೆಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ ಎಂದು ಹೇಳಿದಂತೆ ತೋರುತ್ತಿದೆ.
ಈ ಬಾರಿಯ ಐಪಿಎಲ್ ವೇಳೆ ಕೊಹ್ಲಿ ಡೆಲ್ಲಿಯಲ್ಲಿ ಪಂದ್ಯವನ್ನಾಡಲು ಬಂದಿದ್ದಾಗ ಮೈದಾನದಲ್ಲಿ ತನ್ನ ಕೋಚ್ ಕಾಣಿಸಿದ ವೇಳೆ ನೇರವಾಗಿ ಕೋಚ್ ಬಳಿಕ ತೆರಳಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಈ ವಿಡಿಯೊ ವೈರಲ್ ಆಗಿತ್ತು.
ಇದನ್ನೂ ಓದಿ Virat Kohli: ವಿರಾಟ್ ಕೊಹ್ಲಿ ಮಾಲಿಕತ್ವದ ಪಬ್ ಮೇಲೆ ಎಫ್‌ಐಆರ್, ಅಲ್ಲೇನು ನಡೆದಿತ್ತು?
ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಫೈನಲ್ ಪಂದ್ಯದಲ್ಲಿ 76 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.
ಸದ್ಯ ಕೊಹ್ಲಿ ಲಂಡನ್ನಲ್ಲಿ ತಮ್ಮ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ. ಟೀಮ್ ಇಂಡಿಯಾ ವಿಜಯೋತ್ಸವ ಆಚರಣೆ ಮುಗಿದ ತಕ್ಷಣ ವಿರಾಟ್ ಕೊಹ್ಲಿ ಅವರು ಲಂಡನ್ಗೆ ಪ್ರಯಾಣಿಸಿದ್ದರು. ಕುಟುಂಬಕ್ಕೆ ಮೊದಲ ಪ್ರಾಧಾನ್ಯತೆ ನೀಡುವ ಕೊಹ್ಲಿ ಯಾವುದೇ ಪಂದ್ಯ ಇರಲಿ ಇದು ಮುಕ್ತಾಯಗೊಂಡ ತಕ್ಷಣ ಪತ್ನಿಗೆ ವಿಡಿಯೊ ಕಾಲ್ ಮಾಡಿ ಮಾತನಾಡುತ್ತಾರೆ. ಕೆಲವೊಮ್ಮೆ ಕ್ರಿಕೆಟ್ ಸರಣಿ ಇದ್ದರೂ ಕೂಡ ಇದರಿಂದ ಹಿಂದೆ ಸರಿದು ಕುಟುಂಬದ ಜತೆ ಕಾಲ ಕಳೆದ ನಿದರ್ಶನವೂ ಇದೆ.