Site icon Vistara News

Virat kohli | ಚೊಚ್ಚಲ ಟಿ20(ಐ) ಶತಕವನ್ನು ಪತ್ನಿ, ಪುತ್ರಿಗೆ ಅರ್ಪಿಸಿದ ವಿರಾಟ್‌ ಕೊಹ್ಲಿ

virat kohli

ದುಬೈ : ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ. ಕಳೆದ ಎರಡೂವರೆ ವರ್ಷ ಅವರು ಎದುರಿಸಿದ್ದ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ. ಅಫಘಾನಿಸ್ತಾನ ವಿರುದ್ಧದ ಏಷ್ಯಾ ಕಪ್‌ ಸೂಪರ್‌-೪ ಪಂದ್ಯದಲ್ಲಿ ಅಜೇಯ ೧೨೨ ರನ್ ಬಾರಿಸಿದ ಅವರು ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದರು. ಅಲ್ಲದೆ, ೧೦೨೦ ದಿನಗಳ ಬಳಿಕ ಅಂತಾರಾಷ್ಟ್ರೀಯ ಶತಕವೊಂದನ್ನು ಬಾರಿಸಿ ಇದುವರೆಗಿನ ಎಲ್ಲ ನೋವುಗಳನ್ನು ಮರೆತಿದ್ದಾರೆ. ಏತನ್ಮಧ್ಯೆ ಅವರು ತಮ್ಮ ವಿಶೇಷ ಶತಕವನ್ನು ಪತ್ನಿ ಅನುಷ್ಕಾ ಶರ್ಮ ಹಾಗೂ ಪುತ್ರಿ ವಾಮಿಕಾಗೆ ಅರ್ಪಿಸಿದ್ದಾರೆ.

“ನಾನು ನಿಜವಾಗಿಯೂ ಅಚ್ಚರಿಗೆ ಒಳಗಾಗಿದ್ದೇನೆ. ಈ ಮಾದರಿಯಲ್ಲಿ ನಾನು ಶತಕದ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಈಗ ಅತ್ಯಂತ ಸಂಭ್ರಮದಲ್ಲಿದ್ದೇನೆ. ಕಳೆದ ಎರಡೂವರೆ ವರ್ಷದಲ್ಲಿ ನಾನು ಸಾಕಷ್ಟು ವಿಷಯಗಳನ್ನು ಕಲಿತೆ. ನಾನು ೩೪ ವರ್ಷಕ್ಕೆ ಕಾಲಿಡಲಿದ್ದೇನೆ. ಆಕ್ರೋಶದ ಸಂಭ್ರಮಕ್ಕೆ ವಿರಾಮ ಹೇಳಿದ್ದೇನೆ. ಯಾಕೆಂದರೆ ಒಬ್ಬರು ನನ್ನ ದೃಷ್ಟಿಕೋನವನ್ನೇ ಬದಲಿಸಿದರು. ಅವರೇ ಪತ್ನಿ ಅನುಷ್ಕಾ ಶರ್ಮ. ಹೀಗಾಗಿ ಈ ಶತಕ ನನ್ನ ಪತ್ನಿ ಅನುಷ್ಕಾ ಹಾಗೂ ಪುತ್ರಿ ವಾಮಿಕಾಗೆ ಅರ್ಪಿಸುತ್ತೇನೆ,” ಎಂದು ವಿರಾಟ್‌ ಶತಕದ ಸಾಧನೆಯ ಕುರಿತು ಹೇಳಿಕೊಂಡಿದ್ದಾರೆ.

“ಫಾರ್ಮ್‌ ಕಳೆದುಕೊಂಡ ವೇಳೆಯಲ್ಲಿ ನಾನು ಬೇಸರ ಮಾಡಿಕೊಂಡಿರಲಿಲ್ಲ. ಆದರೆ, ಆ ಹಿಂದೆ ಮಾಡಿರುವ ಸಾಧನೆಗಳ ಬಗ್ಗೆ ಹೆಮ್ಮೆಯಿದೆ. ವಿರಾಮ ಪಡೆದುಕೊಂಡು ಮತ್ತೆ ತಂಡಕ್ಕೆ ಮರಳಿದ್ದು, ವಿರಾಟ್‌ ಕೊಹ್ಲಿ ಹೊಸ ಆವೃತ್ತಿ ಟೀಮ್‌ ಇಂಡಿಯಾದ ಸೇವೆಗೆ ಸಜ್ಜಾಗಿದೆ. ನೆಟ್‌ನಲ್ಲಿ ಬ್ಯಾಟ್‌ ಮಾಡುತ್ತಿದ್ದ ವೇಳೆ ಹಳೆಯ ಫಾರ್ಮ್‌ ಬಂದಿರುವ ಸೂಚನೆ ಸಿಕ್ಕಿತ್ತು,” ಎಂದು ಹೇಳಿದ್ದಾರೆ.

ಇದನ್ನೂ ಓದಿ | ವಿರಾಟ್‌ ದರ್ಶನ, ಟಿ20 ಮಾದರಿಯಲ್ಲಿ ಮೊದಲ ಸೆಂಚುರಿ, ಇನ್ನೂ ಹಲವು ದಾಖಲೆಗಳನ್ನು ಸೃಷ್ಟಿಸಿದ ಕೊಹ್ಲಿ

Exit mobile version