ಮುಂಬಯಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ವಿರಾಟ್ ಕೊಹ್ಲಿ(Virat Kohli) ಮತ್ತೊಮ್ಮೆ ಗುಣಗಾನ ಮಾಡಿದ್ದಾರೆ. ಕ್ರಿಕೆಟ್‍ನಲ್ಲಿ ನಾನು ಮಾಡಿರುವ ಸಾಧನೆಗೆ ನನ್ನ ಬಾಲ್ಯದ ತರಬೇತುದಾರ, ಕುಟುಂಬ ಹಾಗೂ ಪತ್ನಿ ಎಷ್ಟು ಮುಖ್ಯವೋ ಅದೇ ರೀತಿ ಧೋನಿ ಕೂಡ ಬಹು ಮುಖ್ಯ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಜತೆಗೆ ಧೋನಿ ಅವರು ನನ್ನ ಫೋನ್ ಕರೆಯನ್ನು ಸ್ವೀಕರಿಸುವುದಿಲ್ಲ ಎಂಬ ಸ್ವಾರಸ್ಯಕರ ವಿಚಾರವನ್ನೂ ತಿಳಿಸಿದ್ದಾರೆ.
ಆರ್ಸಿಬಿಯ ಪಾಡ್‍ಕಾಸ್ಟ್ ಸೀಸನ್ 2ಗೆ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಭವಿಷ್ಯದಲ್ಲಿ ಏರಿಳಿತ ಕಂಡಾಗ ಜತೆಗಿದ್ದ ಧೋನಿ ಅವರ ಬಗ್ಗೆ ಮನದಾಳದಿಂದ ಮಾತನಾಡಿದರು. “ಬಾಲ್ಯದಲ್ಲಿ ನನ್ನ ಕುಟುಂಬ, ಕ್ರಿಕೆಟ್ ಕಲಿಯುವ ವೇಳೆ ನನ್ನ ತರಬೇತುದಾರರು ನೀಡಿದ ಮಾರ್ಗದರ್ಶನದಂತೆ ಧೋನಿ ಅವರು ಕ್ರಿಕೆಟ್ ಮೈದಾನದಲ್ಲಿ ನನ್ನ ಮಾರ್ಗದರ್ಶಕರಾಗಿದ್ದರು” ಎಂದು ಕೊಹ್ಲಿ ಹೇಳಿದರು.
2008ರಿಂದ 2019 ರವರೆಗೆ ಧೋನಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ನನಗೆ ಲಭಿಸಿದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಮಾನಸಿಕವಾಗಿ ಸದೃಢರಾಗಿರುವುದು, ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಧೋನಿ ಅವರು ನನಗೆ ಕಲಿಸಿದ್ದಾರೆ. ಅವರು ಯಾವಾಗಲೂ ನಮಗೆ ದಾರಿ ತೋರಿಸುವ ಮಾರ್ಗದರ್ಶಕರಾಗಿದ್ದಾರೆ ಎಂದು ಕೋಹ್ಲಿ ಹೇಳಿದರು.
ಇದನ್ನೂ ಓದಿ Virat Kohli: ಅಲಿಬಾಗ್ನಲ್ಲಿ ವಿಲ್ಲಾ ಖರೀದಿಸಿದ ವಿರಾಟ್ ಕೊಹ್ಲಿ; ಇದರ ಬೆಲೆ ಎಷ್ಟು?
ಇದೇ ವೇಳೆ ಅವರು ತಾನು ಧೋನಿಗೆ ಕರೆ ಮಾಡಿದರೆ ಅವರು 99 ಪ್ರತಿಶತ ನನ್ನ ಕರೆಯನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ. ಧೋನಿ ಹೆಚ್ಚಾಗಿ ಮೊಬೈಲ್ ಫೋನ್ ಬಳಕೆ ಮಾಡುವುದಿಲ್ಲ. ಹೀಗಾಗಿ ಅವರು ನನ್ನ ಕರೆಯನ್ನು ಸ್ವೀಕರಿಸುವುದಿಲ್ಲ. ಆದರೆ ಅವರಾಗಿಯೇ ನನಗೆ ಕಾಲ್ ಮಾಡುತ್ತಾರೆ ಎಂದು ಹೇಳಿ ನಕ್ಕರು.