Site icon Vistara News

Virat Kohli: ಕೊಹ್ಲಿಯ ಅರ್ಧಶತಕಕ್ಕೆ ಹಲವು ದಿಗ್ಗಜರ ವಿಶ್ವಕಪ್​ ದಾಖಲೆ ಧೂಳೀಪಟ​

virat kohli

ಮುಂಬಯಿ: ಶ್ರೀಲಂಕಾ ವಿರುದ್ಧ ಸಾಗುತ್ತಿರುವ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಅರ್ಧಶತಕ ಬಾರಿಸುವ ಮೂಲಕ ವಿಶ್ವಕಪ್​ ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಕೊಹ್ಲಿಯ ಅರ್ಧಶತಕದಿಂದಾಗಿ ರೋಹಿತ್​ ಶರ್ಮ, ಶಕೀಬ್​​ ಅಲ್​ ಹಸನ್​ ಮತ್ತು ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಅವರ ದಾಖಲೆ ಪತನಗೊಂಡಿದೆ.

ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅವರು 94 ಎಸೆತ ಎದುರಿಸಿ 11 ಬೌಂಡರಿ ನೆರವಿನಿಂದ 88 ರನ್​ ಗಳಿಸಿ ಔಟಾದರು. ಅವರು ಅರ್ಧಶತಕ ಬಾರಿಸುತ್ತಿದ್ದಂತೆ ವಿಶ್ವಕಪ್​ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು. 21 ಅರ್ಧಶತಕ ಬಾರಿಸಿರುವ ಸಚಿನ್​ ಅವರು ಅಗ್ರಸ್ಥಾನದಲ್ಲಿದ್ದಾರೆ.

ಸದ್ಯ ವಿರಾಟ್​ ಅವರು ವಿಶ್ವಕಪ್​ನಲ್ಲಿ 13 ಅರ್ಧಶತಕ ಬಾರಿಸಿದ ಸಾಧನೆ ಮಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(12*), ಬಾಂಗ್ಲಾದೇಶದ ಶಕೀಬ್​ ಅಲ್​​ ಹಸನ್​(12*) ಮತ್ತು ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ(12) ಆ ಬಳಿಕದ ಸ್ಥಾನದಲ್ಲಿದ್ದಾರೆ. ಸದ್ಯಕ್ಕೆ ಕೊಹ್ಲಿಗೆ ರೋಹಿತ್​ ಮತ್ತು ಶಕೀಬ್​ ಅವರಿಂದ ಪೈಪೋಟಿ ಇದೆ. ಏಕೆಂದರೆ ಇವರು ಹಾಲಿ ಆವೃತ್ತಿಯ ವಿಶ್ವಕಪ್​ನಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ Virat Kohli: ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ವಿರಾಟ್​ ಕೊಹ್ಲಿ

ಸಚಿನ್​ ದಾಖಲೆ ಪತನ

ಇದೇ ಪಂದ್ಯದಲ್ಲಿ ವಿರಾಟ್​ ಅವರು 34 ರನ್​ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ ಪೂರ್ತಿಗೊಳಿಸಿ ಸಾಧನೆ ಮಾಡಿದರು. ಇದೇ ವೇಳೆ ಸಚಿನ್​ ಅವರ ದಾಖಲೆಯನ್ನು ಮುರಿದರು. ಸಚಿನ್​ ಅವರು ಒಟ್ಟು ಕ್ಯಾಲೆಂಡರ್​ ವರ್ಷದಲ್ಲಿ 7 ಬಾರಿ ಸಾವಿರ ರನ್​ ಬಾರಿಸಿದ್ದರು. ಇದೀಗ ವಿರಾಟ್​ ಅವರು 8 ಬಾರಿ ಈ ಸಾಧನೆ ಮಾಡಿ ಸಚಿನ್​ ಅವರ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್​ ಅವರು (2011, 2012, 2013, 2014, 2017, 2018, 2019, 2023) ರಲ್ಲಿ ಸಾವಿರ ರನ್​ ಪೂರ್ತಿಗೊಳಿಸಿದರೆ, ಸಚಿನ್​ ಅವರು (1994, 1996-1997, 1998 2000, 2003, 2007) ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 288* ಏಕದಿನ ಪಂದ್ಯಗಳನ್ನು ಆಡಿ 58.27 ರ ಸರಾಸರಿಯಲ್ಲಿ 13525 ರನ್ ಗಳಿಸಿದ್ದಾರೆ. ಇದರಲ್ಲಿ 48* ಶತಕ ಮತ್ತು 71 ಅರ್ಧಶತಕ ಒಳಗೊಂಡಿದೆ. ಬೌಲಿಂಗ್​ನಲ್ಲೂ 4 ವಿಕೆಟ್ ಪಡೆದಿದ್ದಾರೆ.

ವಿರಾಟ್​ ಕೊಹ್ಲಿ ಅವರು ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್​ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್​ನ 49 ಶತಕವನ್ನು ಪೂರ್ತಿಗೊಳಿಸಲಿದ್ದಾರೆ ಎನ್ನುವಷ್ಟರಲ್ಲಿ, 88 ರನ್​ಗೆ ವಿಕೆಟ್​ ಕೈಚೆಲ್ಲಿ ಮತ್ತೊಮ್ಮೆ ಎಡವಿದರು. ಕಳೆದ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿಯೂ ಅವರು 95 ರನ್​ಗೆ ಔಟಾಗುವ ಮೂಲಕ ಈ ಅವಕಾಶದಿಂದ ವಂಚಿತರಾಗಿದ್ದರು. ಇದೀಗ ಮತ್ತೆ ಎಡವಿದ್ದಾರೆ.

Exit mobile version