ಚೆನ್ನೈ : ಇಬ್ಬರೂ ಕ್ರಿಕೆಟ್ ಅಭಿಮಾನಿಗಳು. ಒಬ್ಬರು ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮ ಅಭಿಮಾನಿಯಾಗಿದ್ದರೆ, ಇನ್ನೊಬ್ಬರು ಮಾಜಿ ನಾಯಕ ವಿರಾಟ್ ಕೊಹ್ಲಿಯ ಫ್ಯಾನ್. ಇಬ್ಬರು ಆಟಗಾರರ ನಡುವೆ ಯಾರು ಉತ್ತಮರು ಎಂಬ ವಿಷಯದ ಗಲಾಟೆಯಲ್ಲಿ ರೋಹಿತ್ ಶರ್ಮ ಅಭಿಮಾನಿಯ ಜೀವವೇ ಹೋಗಿದೆ. ವಿರಾಟ್ ಕೊಹ್ಲಿಯನ್ನು ನಿಂದಿಸಿದ ಎಂಬ ಕಾರಣಕ್ಕೆ ಕೊಹ್ಲಿ ಫ್ಯಾನ್ ಆತನನ್ನು ಕೊಲೆ ಮಾಡಿದ್ದಾನೆ.
ಈ ಘಟನೆ ನಡೆದಿರುವುದು ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪೊಯ್ಯೂರು ಎಂಬ ಗ್ರಾಮದಲ್ಲಿ. ಕೊಲೆಯಾದವ ೨೪ ವರ್ಷದ ವಿಘ್ನೇಶ್ ಹಾಗೂ ಕೊಲೆ ಮಾಡಿದವ ಆತನ ಗೆಳೆಯ ಧರ್ಮರಾಜ್. ಐಟಿಐ ಮುಗಿಸಿರುವ ವಿಘ್ನೇಶ್ ಸಿಂಗಾಪುರದಲ್ಲಿ ಹೋಗಿ ಕೆಲಸ ಮಾಡಲು ವೀಸಾಗೆ ಅರ್ಜಿ ಸಲ್ಲಿಸಿದ್ದು, ಏತನ್ಮಧ್ಯೆ, ಆತನ ಪಾಣವೇ ಹೋಗಿದೆ.
ಮಂಗಳವಾರ ರಾತ್ರಿ ಅವರಿಬ್ಬರೂ ಜತೆಯಾಗಿ ಮದ್ಯಪಾನ ಮಾಡಿ, ಕ್ರಿಕೆಟ್ ಬಗ್ಗೆ ಚರ್ಚೆ ಮಾಡಲು ಕುಳಿತಿದ್ದರು. ರೋಹಿತ್ ಅಭಿಮಾನಿಯಾಗಿರುವ ವಿಘ್ನೇಶ್ ಮಾತಿನ ಮಧ್ಯೆ ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಿಂದಿಸಿದ್ದಾನೆ. ಕೋಪಗೊಂಡ ಧರ್ಮರಾಜ್ ಬಾಟಲಿಯಿಂದ ವಿಘ್ನೇಶ್ ತಲೆಗೆ ಹೊಡೆದು ಬಳಿಕ ಕೈಯಲ್ಲಿದ್ದ ಕ್ರಿಕೆಟ್ ಬ್ಯಾಟ್‌ನಿಂದಲೂ ಹಲ್ಲೆ ನಡೆಸಿ ಮನೆಗೆ ಹೋಗಿದ್ದ. ರಕ್ತ ಸ್ರಾವದಿಂದ ವಿಘ್ನೇಶ್ ಮೃತಪಟ್ಟಿದ್ದು, ಮರುದಿನ ಕೆಲಸಕ್ಕೆ ಹೋಗುತ್ತಿದ್ದ ಜನರಿಗೆ ಮೃತದೇಹ ಕಂಡಿದೆ. ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | BCCI President | ಗಂಗೂಲಿಗೆ ಕರ್ಮ ಫಲ ತಟ್ಟಿದೆ ಎನ್ನುತ್ತಿದ್ದಾರೆ ವಿರಾಟ್ ಕೊಹ್ಲಿ ಅಭಿಮಾನಿಗಳು!