ಕೊಲಂಬೊ: ಹೈವೋಲೇಜ್ ಕದನ ಎಂದೇ ಕರೆಯಲ್ಪಡುವ ಭಾರತ ಮತ್ತು ಪಾಕಿಸ್ತಾನ ನಡುವಣ ಏಷ್ಯಾಕಪ್(Asia Cup 2023) ಸೂಪರ್-4(Pakistan vs India, Super Fours) ಪಂದ್ಯ ಇಂದು ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್(R Premadasa Stadium) ಸ್ಟೇಡಿಯಂನಲ್ಲಿ ಮಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ಜಗತ್ತೇ ಕಾದು ಕುಳಿತಿದೆ. ಆದರೆ ಪಾಕಿಸ್ತಾನಕ್ಕೆ ಕಿಂಗ್ ಖ್ಯಾತಿಯ ಕೊಹ್ಲಿಯದ್ದೇ ದೊಡ್ಡ ಚಿಂತೆಯಾಗಿದೆ.
ಇಲ್ಲಿ ಕೊಹ್ಲಿಯದ್ದೇ ಕಾರುಬಾರು
ವಿರಾಟ್ ಕೊಹ್ಲಿ ಅವರು ಆರ್. ಪ್ರೇಮದಾಸ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅಲ್ಲದೆ ಇದು ಅವರ ನೆಚ್ಚಿನ ಮೈದಾನ ಕೂಡ ಆಗಿದೆ. ಏಕೆಂದರೆ ಕೊಹ್ಲಿ ಇಲ್ಲಿ ಇದುವರೆಗೆ ಒಟ್ಟು 8 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 103.8 ಸರಾಸರಿಯಲ್ಲಿ ರನ್ಗಳಿಸಿ 519 ರನ್ ಕಲೆಹಾಕಿದ್ದಾರೆ. ಇದರಲ್ಲಿ 3 ಶತಕ ಹಾಗೂ ಒಂದು ಅರ್ಧಶತಕ ಒಳಗೊಂಡಿದೆ.
ಇಲ್ಲಿ ಆಡಿದ ಕೊನೆಯ ಮೂರು ಏಕದಿನ ಇನಿಂಗ್ಸ್ಗಳಲ್ಲಿ ಕೊಹ್ಲಿ 128*, 131, 110* ಶತಕ ಬಾರಿಸಿ ಮಿಂಚಿದ್ದಾರೆ. ಎರಡು ಬಾರಿ ಅಜೇಯರಾಗಿ ಉಳಿದಿದ್ದರು. ಇದು ಪಾಕ್ಗೆ ತಲೆನೋವು ತಂದಿದೆ. ಅವರ ರನ್ ಆರ್ಭಟವನ್ನು ಹೇಗೆ ಕಟ್ಟಿಹಾಕುವುದು ಎಂದು ಚಿಂತಿಸುವಂತೆ ಮಾಡಿದೆ. ಮೊದಲ ಮುಖಾಮುಖಿಯಲ್ಲಿ ಕೊಹ್ಲಿ 4 ರನ್ಗೆ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದ್ದರು. ಕೊಹ್ಲಿ ಪಾಕ್ ವಿರುದ್ಧ ಕೇವಲ 31 ರನ್ ಬಾರಿಸಿದರೆ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದ್ದಾರೆ. ಆಗ ಧೋನಿ ಅವರ ದಾಖಲೆ ಪತನಗೊಳ್ಳಲಿದೆ. ಸದ್ಯ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಸಾರಸ್ಯವೆಂದರೆ ಕಿಂಗ್ ಕೊಹ್ಲಿ 2012ರಲ್ಲಿ ಪಾಕಿಸ್ತಾನ ವಿರುದ್ಧವೇ 183ರನ್ ಬಾರಿಸಿದ್ದರು. ಈ ಸಾಧನೆಯ ಪಟ್ಟಿಯಲ್ಲಿ ಬಾಬರ್ಗೆ(151) ದ್ವಿತೀಯ ಸ್ಥಾನ. ಮೂರನೇ ಸ್ಥಾನ ಯೂನಿಸ್ ಖಾನ್(144), ನಾಲ್ಕನೇ ಸ್ಥಾನ ಬಾಂಗ್ಲಾದ ಮುಸ್ಫಿಕರ್ ರಹಿಂ(144) ಪಡೆದಿದ್ದಾರೆ.
ಇದನ್ನೂ ಓದಿ Virat Kohli: ಲಂಕಾದ ಉದಯೋನ್ಮುಖ ಕ್ರಿಕೆಟಿಗರಿಗೆ ಸಲಹೆ ನೀಡಿದ ವಿರಾಟ್ ಕೊಹ್ಲಿ
13 ಸಾವಿರ ರನ್ ಸನಿಹ ಕೊಹ್ಲಿ
ಈ ಟೂರ್ನಿಯಲ್ಲಿ ಇನ್ನು ವಿರಾಟ್ ಅವರು 98 ರನ್ ಬಾರಿಸಿದರೆ ಏಕದಿನ ಮಾದರಿಯಲ್ಲಿ 13 ಸಾವಿರ ರನ್ ಪೂರ್ತಿಗೊಳಿಸಲಿದ್ದಾರೆ. ಇದೇ ವೇಳೆ ಸಚಿನ್ ಅವರ ಹೆಸರಿನಲ್ಲಿದ ದಾಖಲೆ ಮುರಿಯಲಿದ್ದಾರೆ. ಅತಿ ಕಡಿಮೆ ಏಕದಿನ ಪಂದ್ಯಗಳಲ್ಲಿ ವೇಗವಾಗಿ 13 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸಚಿನ್ ಅವರ ದಾಖಲೆ ಮುರಿಯಲಿದ್ದಾರೆ. ಸಚಿನ್ ಅವರು 321 ಪಂದ್ಯಗಳನ್ನು ಆಡುವ ಮೂಲಕ ಈ ದಾಖಲೆ ಬರೆದಿದ್ದರು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕೆ.ಎಲ್ ರಾಹುಲ್(ವಿಕೆಟ್ ಕೀಪರ್).
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್.